ಕೇರಳ: ಕೊರೋನ ವೈರಸ್ ಲಕ್ಷಣ ಇಲ್ಲದ ಇಬ್ಬರಲ್ಲಿ ಸೋಂಕು !

Update: 2020-04-07 16:24 GMT

ತಿರುವನಂತಪುರಂ, ಎ.7: ಕೊರೋನ ಸೋಂಕಿನ ಲಕ್ಷಣ ಇಲ್ಲದಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್‌ನಲ್ಲಿದ್ದ ಇಬ್ಬರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

19 ವರ್ಷದ ವಿದ್ಯಾರ್ಥಿನಿ ಮಾರ್ಚ್ 15ರಂದು ದಿಲ್ಲಿಯಿಂದ ರೈಲಿನ ಮೂಲಕ ಎರ್ನಾಕುಳಂಗೆ ಹೊರಟಿದ್ದು ಮಾರ್ಚ್ 17ರಂದು ಎರ್ನಾಕುಳಂ ತಲುಪಿದ್ದಾಳೆ. ಈ ಹಂತದಲ್ಲಿ ಇವಳಲ್ಲಿ ಕೊರೋನ ಸೋಂಕಿನ ಲಕ್ಷಣ ಇರಲಿಲ್ಲ. ಮತ್ತೊಬ್ಬರು 60 ವರ್ಷದ ವ್ಯಕ್ತಿ. ದುಬೈಯಿಂದ ಮಾರ್ಚ್ 19ರಂದು ಕೇರಳಕ್ಕೆ ಆಗಮಿಸಿದ ಈ ವ್ಯಕ್ತಿಯಲ್ಲೂ ಸೋಂಕಿನ ಲಕ್ಷಣ ಇರಲಿಲ್ಲ. ಆದರೆ ದಿಲ್ಲಿ ಮತ್ತು ದುಬೈ ಕೊರೋನ ಸೋಂಕಿನ ಹೈರಿಸ್ಕ್ ವಿಭಾಗದಲ್ಲಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇವರಿಗೆ 28 ದಿನದ ಕ್ವಾರಂಟೈನ್ ವಿಧಿಸಲಾಗಿತ್ತು. 14 ದಿನದ ಕ್ವಾರಂಟೈನ್ ಸಂದರ್ಭ ನಡೆಸಿದ ತಪಾಸಣೆಯಲ್ಲಿ ಇಬ್ಬರಲ್ಲೂ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಎಎನ್ ಶೀಜಾ ಹೇಳಿದ್ದಾರೆ.

ಜನತೆ ಕೊರೋನ ಸೋಂಕಿನ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ ಎಂದು ಜಿಲ್ಲಾಧಿಕಾರಿ ಪಿಬಿ ನೂಹ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News