ಕಾರ್ನಾಡು ಬೈಪಾಸ್ ಬಳಿ ಅಗ್ನಿ ಆಕಸ್ಮಿಕ: ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

Update: 2020-04-07 16:53 GMT

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕಾರ್ನಾಡು ಬೈಪಾಸ್ ಬಳಿಯಲ್ಲಿ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಆಕಸ್ಮಿಕದಿಂದ ಸ್ಥಳೀಯ ನಿವಾಸಿ ರಝಾಕ್ ಎಂಬವರ ಗ್ಯಾರೇಜ್ ಬಳಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಬೆಂಕಿ ಗಾಹುತಿಯಾಗಿದ್ದು ಸ್ಥಳೀಯರ ಸಮಯ ಪ್ರಜ್ಞೆ ಹಾಗೂ ಶ್ರಮದಿಂದ ಬೆಂಕಿಯನ್ನು ನಂದಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡು ಬೈಪಾಸ್ ಬಳಿಯಲ್ಲಿರುವ ವಿದ್ಯುತ್ ಕಂಬದಲ್ಲಿ ಮಂಗಳವಾರ ಮದ್ಯಾಹ್ನ ಆಕಸ್ಮಿಕವಾಗಿ ಬೆಂಕಿಯ ಕಿಡಿ ಹಾರಿದ್ದು ಕೂಡಲೇ ಸ್ಥಳದಲ್ಲಿ ಹುಲ್ಲಿಗೆ ಬೆಂಕಿ ತಗಲಿ ಜ್ವಾಲೆಯಂತೆ ಹರಡಲಾರಂಬಿಸಿದಾಗ ಪ್ರತ್ಯಕ್ಷದರ್ಶಿ ಸ್ಥಳೀರಾದ ಉದಯ ಕುಮಾರ್ ಶೆಟ್ಟಿ ಮುಲ್ಕಿ ಪೊಲಿಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ದೂರು ನೀಡಿದ್ದಾರೆ. ಆದರೆ ಅಗ್ನಿ ಜ್ವಾಲೆ ಮತ್ತಷ್ಟು ಜೋರಾಗಿ ಗ್ಯಾರೇಜ್ ಬಳಿಯಲ್ಲಿ ದುರಸ್ತಿಗೆಂದು ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಹತ್ತಿ ಸುಡಲಾರಂಭಿಸಿದಾಗ ಸ್ಥಳೀಯರಾದ ನಾಗರಾಜ ಬಪ್ಪನಾಡು, ಗಿರೀಶ್ ಮೆಂಡನ್, ಮೋಹನ್ ಸುವರ್ಣ, ರಿಯಾನ್ ಮತ್ತಿತರರು ಮುಲ್ಕಿ ಪೊಲೀಸ್ ಎಎಸ್ಸೈ ದೇಜಪ್ಪ ಹಾಗೂ ಚಂದ್ರಶೇಖರ ನೇತೃತ್ವದಲ್ಲಿ ನೀರು ಹಾಯಿಸಿ ಆದಷ್ಟು ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಬೆಂಕಿ ಜ್ವಾಲೆ ಮತ್ತಷು ಮುಂದಕ್ಕೆ ಹೋಗಿ ಗ್ಯಾರೇಜ್‍ಗೆ ಹಾನಿ ಮಾಡಲು ಯತ್ನಿಸಿದಾಗ ಸ್ಥಳಕ್ಕೆ ಆಗಮಿಸಿದ ಹಳೆಯಂಗಡಿಯ ಪೂಜಾ ಎರೆಂಜರ್ಸ್ ರವರಿಂದ ನೀರನ್ನು ಹಾಯಿಸಿ ಬೆಂಕಿಯನ್ನು ನಂದಿಸಲಾಯಿತು.

ಬೆಂಕಿ ಆಕಸ್ಮಿಕದಿಂದ ಸುಮಾರು 10 ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

ಸ್ಥಳಕ್ಕೆ ಮುಲ್ಕಿ ಇನ್ಸ್‍ಪೆಕ್ಟರ್ ಜಯರಾಮ ಗೌಡ, ಮಂಗಳೂರು ಅಗ್ನಿಶಾಮಕ ದಳದ ಅಧಿಕಾರಿ ಮಹಮ್ಮದ್ ನವಾಝ್ಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮುಲ್ಕಿಯಲ್ಲಿ ಅಗ್ನಿಶಾಮಕ ದಳ ಘಟಕಕ್ಕೆ ಒತ್ತಾಯ

ಮುಲ್ಕಿ ಹೋಬಳಿಯಾದ ಕಿನ್ನಿಗೋಳಿ ,ಹಳೆಯಂಗಡಿ .ಏಳಿಂಜೆ. ಪಕ್ಷಿಕೆರೆ, ಅತಿಕಾರಿಬೆಟ್ಟು ಪರಿಸರದಲ್ಲಿ ಏನೇ ಅಗ್ನಿ ಆಕಸ್ಮಿಕ ಘಟನೆಗಳು ನಡೆದರೂ ಅಗ್ನಿಶಾಮಕ ದಳಕ್ಕಾಗಿ ದೂರದ ಮೂಡಬಿದ್ರೆ ಅಥವಾ ಮಂಗಳೂರನ್ನು ಆಶ್ರಯಿಸಬೇಕಾಗುತ್ತದೆ. ಮಂಗಳವಾರ ಮುಲ್ಕಿಯ ಕಾರ್ನಾಡ್ ಬೈಪಾಸ್ ಬಳಿಯಲ್ಲಿ ನಡೆದ ಅಗ್ನಿ ಆಕಸ್ಮಿಕ ನಡೆದು ಸ್ಥಳೀಯರು ಅಗ್ನಿ ನಂದಿಸಿದ ಬಳಿಕ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು ಸ್ಥಳೀಯರನ್ನು ಆಕ್ರೋಶಕ್ಕೀಡು ಮಾಡಿದೆ. ಕೂಡಲೇ ಮುಲ್ಕಿಗೆ ಅಗ್ನಿಶಾಮಕ ದಳ ಮಂಜೂರು ಮಾಡುವಂತೆ ಮಾಜಿ ನ.ಪಂ. ಸದಸ್ಯ ಅಬ್ದುಲ್ ರಝಾಕ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News