ಕೊರೋನ ವೈರಸ್ : ದ.ಕ.ಜಿಲ್ಲೆ: ಹೋಂ ಕ್ವಾರಂಟೈನ್ ಸಂಖ್ಯೆಯಲ್ಲಿ ಇಳಿಮುಖ

Update: 2020-04-07 17:18 GMT

ಮಂಗಳೂರು, ಎ.7: ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ‘ಕೊರೋನ’ ಪ್ರಕರಣಗಳಲ್ಲಿ ಗೆಲುವು ಸಾಧಿಸತೊಡಗಿದೆ. ಮಂಗಳವಾರ ಸ್ವೀಕರಿಸಿದ 10 ಮಂದಿಯ ವರದಿಯು ನೆಗೆಟಿವ್ ಆಗಿದ್ದು, ಇದು ದ.ಕ.ಜಿಲ್ಲೆಯ ಮಟ್ಟಿಗೆ ಸಿಹಿ ಸುದ್ದಿಯಾಗಿದೆ.

ಮಂಗಳವಾರ 49 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಇದರೊಂದಿಗೆ ಈವರೆಗೆ 38,701 ಮಂದಿಯ ಸ್ಕ್ರೀನಿಂಗ್ ಮಾಡಿದಂತಾಗಿದೆ. ಈ ಮಧ್ಯೆ ಮಂಗಳವಾರ ಮತ್ತೆ 7 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಸೋಮವಾರ ದವರೆಗೆ 4,237 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದರೆ, ಮಂಗಳವಾರ ಅದರ ಸಂಖ್ಯೆಯು 3930ಕ್ಕೆ ಇಳಿದಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಯಾರೂ ಕ್ವಾರಂಟೈನ್‌ನಲ್ಲಿಲ್ಲ. ಇಎಸ್‌ಐ ಆಸ್ಪತ್ರೆಯಲ್ಲಿ 10 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಮಂಗಳವಾರ 28 ದಿನದ ಕ್ವಾರಂಟೈನ್ (ನಿಗಾ) ಅವಧಿಯನ್ನು 1989 ಮಂದಿ ಪೂರೈಸಿದ್ದಾರೆ.

ಈವರೆಗೆ 348 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 341 ಮಂದಿಯ ವರದಿಯನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 329 ಮಂದಿಯ ವರದಿಯು ನೆಗೆಟಿವ್ ಆಗಿದ್ದರೆ, 12 ಮಂದಿಯ ವರದಿಯು ಪಾಸಿಟಿವ್ ಆಗಿತ್ತು. ಪಾಸಿಟಿವ್‌ಗಳ ಪೈಕಿ 4 ಮಂದಿ ಗುಣಮುಖರಾಗಿ ಸೋಮವಾರ ವೆನ್ಲಾಕ್ ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಆಗಿದ್ದರು. ಇನ್ನೂ 7 ಮಂದಿಯ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News