ಕೋಮು ಪ್ರಚೋದನಕಾರಿ ಪೋಸ್ಟ್ : ಬಂಟ್ವಾಳದಲ್ಲಿ ಮತ್ತೊಂದು ಪ್ರಕರಣ ದಾಖಲು

Update: 2020-04-08 08:01 GMT

ಬಂಟ್ವಾಳ : ಕೊರೋನ ವೈರಸ್ ಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಒಂದು ಸಮುದಾಯವನ್ನು ಅವಹೇಳನ ಮಾಡಿ ಪೋಸ್ಟ್ ಹಾಕಿರುವ ಆರೋಪದಲ್ಲಿ ಯುವಕನೋರ್ವನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಜಿಪ ಮೂಡ ಬೊಳ್ಳಾಯಿ ಯುನಿಟ್ ಸದಸ್ಯ ಅಬ್ದುಲ್ ಬಶೀರ್ ಜೆ.ಎಂ. ಎಂಬವರು ನೀಡಿರುವ ದೂರಿನಂತೆ, ತಾಲೂಕಿನ ಪಣೋಲಿಬೈಲು ನಿವಾಸಿ ಹರೀಶ್ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಹರೀಶ್ ಕುಮಾರ್ ತನ್ನ ಫೇಸ್ ಬುಕ್ ಖಾತೆಯಲ್ಲಿ, ದೇಶದಲ್ಲಿ ಕೊರೋನ ವೈರಸ್ ಸೋಂಕು ಹರಡಲು ಮುಸ್ಲಿಮರು ಕಾರಣವೆಂಬಂತೆ ಮುಸ್ಲಿಮರು, ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಬರಹಗಳನ್ನು ಹಾಕಿರುವುದಲ್ಲದೆ ಮುಸ್ಲಿಮ್ ಧರ್ಮಗುರುಗಳನ್ನು ಕೆಟ್ಟದಾಗಿ ಚಿತ್ರೀಕರಿಸಿ ಫೇಸ್ ಬುಕ್ ನಲ್ಲಿ ಹಂಚಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಒಂದು ಧರ್ಮ ಮತ್ತು ಧರ್ಮ ಗುರುಗಳನ್ನು ನಿಂದಿಸಿ ಅವಹೇಳನ ಮಾಡುವ ಮೂಲಕ ಸಮಾಜದಲ್ಲಿ ಕೋಮು ವೈಷಮ್ಯವನ್ನು ಹರಡಿ ಕೋಮು ಗಲಭೆ ನಡೆಸುವ ಉದ್ದೇಶವನ್ನು ಹರೀಶ್ ಕುಮಾರ್ ಹೊಂದಿದ್ದು ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ದೂರಿ‌ನಲ್ಲಿ ಒತ್ತಾಯಿಸಲಾಗಿದೆ. 

ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News