ಭಟ್ಕಳ: ಗರ್ಭಿಣಿಯಲ್ಲಿ ಕೋವಿಡ್-19 ಸೋಂಕು ಪತ್ತೆ

Update: 2020-04-08 11:11 GMT
ಸಾಂದರ್ಭಿಕ ಚಿತ್ರ

ಭಟ್ಕಳ : ಗಲ್ಫ್ ನಿಂದ ಮರಳಿದ ವ್ಯಕ್ತಿಯಲ್ಲಿರದ ಕೋವಿಡ್ -19 ಸೋಂಕು, ಆತನ 26 ವರ್ಷದ ಗರ್ಭಿಣಿ ಪತ್ನಿಯಲ್ಲಿ ಕಾಣಿಸಿಕೊಂಡಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದು, ಭಟ್ಕಳದ ಜನರಲ್ಲಿ ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ.

ಕಾರವಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ ಎಂಬ ಶುಭ ಸಮಾಚಾರವನ್ನು  ಮಂಗಳವಾರ ಉ.ಕ.ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ನೀಡಿದ್ದು, ಕೊರೋನ ವೈರಸ್ ನಿಂದ ಭಟ್ಕಳದ ಜನತೆ ಬಹುಬೇಗನೆ ಮುಕ್ತಿ ಪಡೆಯುತ್ತಾರೆಂಬ ಭರವಸೆಗೆ ತಣ್ಣೀರೆರಚಿದಂತಾಗಿದೆ.

ಬುಧವಾರ ಬೆಳಕಿಗೆ ಬಂದಿರುವ ಹೊಸ ಪ್ರಕರಣವೊಂದು ಮತ್ತಷ್ಟು ಸವಾಲುಗಳನ್ನು ಹುಟ್ಟುಹಾಕಿದೆ. ಗಲ್ಫ್ ನಿಂದ ಮರಳಿದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಂಡಿರುವ ಈ ಸೋಂಕು ಭಟ್ಕಳದ ಸ್ಥಳೀಯರಲ್ಲಿ ಯಾರಲ್ಲಿಯೂ ಕಾಣಿಸಿಕೊಂಡಿದ್ದಿಲ್ಲ. ಸೋಂಕಿತ ವ್ಯಕ್ತಿಯ ಕುಟುಂಬದ ಒಂದಿಬ್ಬರಲ್ಲಿ ಕಾಣಿಸಿಕೊಂಡಿತ್ತು. ಆದರೆ ಇದೊಂದು ಹೊಸ ರೀತಿಯ ಪ್ರಕರಣವಾಗಿದ್ದು ಈ ಕುರಿತಂತೆ ಬಾಧಿತ ಮಹಿಳೆಯ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದಾರೆ ಎನ್ನುವುದರ ಕುರಿತು ಜಿಲ್ಲಾಢಳಿತ ಹುಡುಕಾಟದಲ್ಲಿ ತೊಡಗಿದೆ.

ಬುಧವಾರ ಸೋಂಕು ದೃಡಪಟ್ಟಿರುವ ಮಹಿಳೆಗೆ ಇಬ್ಬರು ಮಕ್ಕಳು ಇದ್ದು, ಈಕೆಯ ಪತಿ ದುಬೈನಿಂದ ವಾಪಸ್ ಆದವರು. ಆದರೆ, ಪತಿಯ ಗಂಟಲು ಪರೀಕ್ಷೆಯ ವರದಿ ನೆಗೆಟಿವ್ ಆಗಿದ್ದು ಪತ್ನಿಯ ವರದಿ ಪಾಸಿಟಿವ್ ಬಂದ ನಂತರ ಮತ್ತೊಮ್ಮೆ ಪತಿಯ ಗಂಟಲು ದ್ರವವನ್ನು ಪರೀಕ್ಷೆಗೆಂದು ಕಳುಹಿಸಲಾಗಿದೆ  ಎಂಬ ಮಾಹಿತಿ ಲಭ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News