ಕೊರೋನ ತಗಲಿರುವ ಸುಳ್ಳು ಸುದ್ದಿ ಪ್ರಚಾರ : ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು

Update: 2020-04-08 12:40 GMT

ಸುರತ್ಕಲ್ : ವಿನಾ: ಕಾರಣ ನನಗೆ ಕೊರೋನ ಸೋಂಕು ತಗಲಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಡಂಬೈಲ್‌ನ ಫಾತಿಮಾ ಸೂಪರ್ ಮಾರ್ಕೆಟ್‌ನ ಮಾಲಕ ಮುಹಮ್ಮದ್ ಅಲಿ ಎಂಬವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮದುವೆ ಸಮಾರಂಭಕ್ಕೆ ಬಂದಿದ್ದ ನನ್ನ ಮಕ್ಕಳು ಫೆಬ್ರವರಿ 10ರಂದೇ ವಿದೇಶಕ್ಕೆ ಹಿಂದಿರುಗಿದ್ದರು. ಈ ಕಾರಣವನ್ನು ಮುಂದಿಟ್ಟುಕೊಂಡು ಕೆಲವರು ಸಮಾಜದಲ್ಲಿ ಸ್ವಾಸ್ಥ ಕದಡುವ ಹಾಗೂ ನನ್ನ ವ್ಯಾಪಾರಕ್ಕೆ ನಷ್ಟ ಉಂಟು ಮಾಡುವ ದುರುದ್ದೇಶದಿಂದ ನನಗೆ ಕೊರೋನ ಸೋಂಕು ಇರುವುದಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ.

 ಈ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆಗೆ ಭೇಟಿ ನೀಡಿ ವಿಚಾರಿಸಿದ ಬಳಿಕ, ವೈದ್ಯರಿಗೆ ಇದೊಂದು ಸುಳ್ಳು ವದಂತಿ ಎಂದು ಸ್ಪಷ್ಟನೆ ದೊರೆತಿದೆ. ಆ ಬಳಿಕವೂ ಕಿಡಿಗೇಡಿಗಳು ಅಪಪ್ರಚಾರ ಮುಂದುವರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಿಡಿಗೇಡಿಗಳ ಅಪಪ್ರಚಾರದಿಂದಾಗಿ ನನ್ನ ವ್ಯಾಪಾರದಲ್ಲಿ ನಷ್ಟ ಉಂಟಾಗಿದೆ. ಅಲ್ಲದೆ, ಮಾನಸಿಕವಾಗಿ ಕುಗ್ಗುವಂತಾಗಿದೆ ಎಂದು ಪ್ರಕರಣ ದಾಖಲಿಸಿರುವ ಮುಹಮ್ಮದ್ ಅಲಿ, ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

 ಅನೇಕ ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಯಶಸ್ವಿ ವ್ಯಾಪಾರಿಗಳನ್ನೇ ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಸುಳ್ಳು ಪ್ರಚಾರ ಮಾಡುತ್ತಿದ್ದಾರೆಂದು ಸ್ಥಳೀಯರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News