ಕೊರೋನ ಪರೀಕ್ಷೆ ತಪ್ಪಿಸಿಕೊಂಡ ಹಲವು ಅಧಿಕಾರಿಗಳು: ಮಾನವ ಹಕ್ಕು ಆಯೋಗದಿಂದ ನೋಟಿಸ್

Update: 2020-04-08 12:36 GMT

ಭೋಪಾಲ್: ನಗರದಿಂದ ವರದಿಯಾದ 85 ಕೊರೋನ ವೈರಸ್ ಪಾಸಿಟಿವ್ ಪ್ರಕರಣಗಳ ಪೈಕಿ ಕನಿಷ್ಠ 40 ಪ್ರಕರಣಗಳು ರಾಜ್ಯದ ಆರೋಗ್ಯ ಇಲಾಖೆಯೊಳಗಿನಿಂದಲೇ ವರದಿಯಾಗಿರುವುದರಿಂದ ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿರುವ ಮಾರ್ಗಸೂಚಿಗಳನ್ನು ಅಧಿಕಾರಿಗಳೇ ಉಲ್ಲಂಘಿಸಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ಕೊರೋನ ಸೋಂಕಿತರ ಪೈಕಿ ರಾಜ್ಯದ ಮುಖ್ಯ ಆರೋಗ್ಯ ಕಾರ್ಯದರ್ಶಿ ಪಲ್ಲವಿ ಜೈನ್ ಗೋವಿಲ್, ಹೆಲ್ತ್ ಕಾರ್ಪೊರೇಶನ್ ಎಂಡಿ ಜೆ ವಿಜಯ್ ಕುಮಾರ್ ಹಾಗೂ ಹೆಚ್ಚುವರಿ ಆರೋಗ್ಯ ನಿರ್ದೇಶಕಿ ಡಾ ವೀಣಾ ಸಿನ್ಹಾ ಕೂಡ ಸೇರಿದ್ದಾರೆ.

ರಾಜ್ಯದ ಕೆಲ ಉನ್ನತ ಅಧಿಕಾರಿಗಳು ಕೋವಿಡ್-19 ಲಕ್ಷಣಗಳನ್ನು ಹೊಂದಿದ್ದ ಹೊರತಾಗಿಯೂ ಆಸ್ಪತ್ರೆಗೆ ದಾಖಲಾಗುವುದನ್ನು ವಿಳಂಬಿಸಿದ್ದಾರೆಂಬ ಆರೋಪಗಳ ಕುರಿತಂತೆ ಸರಕಾರದಿಂದ ರಾಜ್ಯ ಮಾನವ ಹಕ್ಕುಗಳ ಆಯೋಗ ವಿವರಣೆ ಕೇಳಿದೆ.

ಮಧ್ಯ ಪ್ರದೇಶ ಸರಕಾರದ ಮುಖ್ಯ ಕಾರ್ಯದರ್ಶಿ ನೋಟಿಸ್ ಜಾರಿಗೊಳಿಸಿ ಕೋವಿಡ್-19 ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಎಲ್ಲಾ ಅಧಿಕಾರಿಗಳು ಪರೀಕ್ಷೆಗಾಗಿ ಕೋವಿಡ್ ಆಸ್ಪತ್ರೆಗಳನ್ನು ತಲುಪಿದ್ದಾರೆ ಎಂಬ ಕುರಿತು ಕಾಂಗ್ರೆಸ್ ಸಂಸದ ವಿವೇಕ್ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಮುಖ್ಯ ಆರೋಗ್ಯ ಕಾರ್ಯದರ್ಶಿ ಪಲ್ಲವಿ ಜೈನ್ ಅವರ ಪುತ್ರ ಅಮೆರಿಕಾದಿಂದ ವಾಪಸಾದ ನಂತರ ಕ್ವಾರಂಟೀನ್‍ ನಲ್ಲಿದ್ದರು. ಅವರಲ್ಲಿ ಕೊರೋನ ಲಕ್ಷಣಗಳು ಇಲ್ಲದೇ ಇದ್ದರೂ ಪಲ್ಲವಿ ಅವರು ಕೊರೋನ ಪಾಸಿಟಿವ್ ಆಗಿದ್ದಾರೆ, ಕುಟುಂಬದ ಇತರರಲ್ಲಿ ಕೊರೋನ ಲಕ್ಷಣಗಳಿಲ್ಲ ಎಂದು ತಿಳಿದು ಬಂದಿದೆ.

ಸದ್ಯ ರಾಜ್ಯದ ಕೊರೋನ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ 14 ಹಿರಿಯ ಐಎಎಸ್ ಅಧಿಕಾರಿಗಳು ಕ್ವಾರಂಟೈನ್‍ನಲ್ಲಿದ್ದಾರೆ. ಇವರ ಹೊರತಾಗಿ ಹಲವು ಹಿರಿಯ ಅಧಿಕಾರಿಗಳು ಸಿಬ್ಬಂದಿಗಳೂ ಕ್ವಾರಂಟೈನ್‍ನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News