ಸಂಪೂರ್ಣ ಸುರಕ್ಷತಾ ವಸ್ತ್ರದಲ್ಲಿ ಐಎಎಸ್ ಅಧಿಕಾರಿ , ವೈದ್ಯರಿಗೆ ಕೇವಲ ಮಾಸ್ಕ್ !

Update: 2020-04-08 12:43 GMT

ಹೊಸದಿಲ್ಲಿ: ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ದೇಶದ ವೈದ್ಯಕೀಯ ಸಮುದಾಯ ಸುರಕ್ಷಾ ಸಾಧನಗಳ ಕೊರತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ರಾಜಸ್ಥಾನದಲ್ಲಿ ನಡೆದ ಸಭೆಯೊಂದರಲ್ಲಿ  ಭಾಗವಹಿಸಿದ್ದ  ಜಿಲ್ಲಾ ಕಲೆಕ್ಟರ್ ಒಬ್ಬರು ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್ಮೆಂಟ್ (ಪಿಪಿಇ) ಧರಿಸಿದ್ದರೆ ಸಭೆಯಲ್ಲಿದ್ದ ಇತರ ವೈದ್ಯಕೀಯ ಸಿಬ್ಬಂದಿ ಕೇವಲ ಮಾಸ್ಕ್ ಧರಿಸಿದ ಚಿತ್ರವೊಂದು ವೈರಲ್ ಆಗಿದೆ.

ರಾಜಸ್ಥಾನ ಮೂಲದ ವೈದ್ಯ ಪಂಕಜ್ ಮೀನಾ ಖೋಕರ್ ಫೋಟೊ ಟ್ವೀಟ್ ಮಾಡಿದ್ದು ಅದೀಗ ವೈರಲ್ ಆಗಿದೆ. ಜತೆಗೆ ಅವರು ಮಾಡಿರುವ ಪೋಸ್ಟ್ ಹೀಗಿದೆ -"ಐಎಎಸ್ ಅಧಿಕಾರಿಯೊಬ್ಬರು ಸಂಪೂರ್ಣ ಪಿಪಿಇ ಕಿಟ್ ಧರಿಸಿ ವೈದ್ಯರು ಸಾಮಾನ್ಯ ಬಟ್ಟೆ ಮತ್ತು ಮಾಸ್ಕ್ ಧರಿಸಿರುವುದನ್ನು ನೋಡಿದಾಗ, ಮೋದಿಯ ಭರವಸೆ ಇಲ್ಲಿ ಕೆಲಸ ಮಾಡಿಲ್ಲ ಎಂದು ನನಗನಿಸುತ್ತದೆ''

ಚಿತ್ರದಲ್ಲಿನ ಗೋಡೆಯಲ್ಲಿನ ಬರಹವನ್ನು ಗಮನಿಸಿದಾಗ ಈ ಸಭೆ ಇಂದೋರ್ ನಗರದಲ್ಲಿ ನಡೆದಿದೆ ಎಂಬುದು ತಿಳಿದು ಬರುತ್ತದೆ. ದೇಶದಲ್ಲಿ 50ಕ್ಕೂ ಅಧಿಕ ವೈದ್ಯರು, ನರ್ಸ್ ಸಹಿತ ಇತರ ಸಿಬ್ಬಂದಿ ಕೊರೋನ ಸೋಂಕಿಗೆ ತುತ್ತಾಗಿರುವಂತಹ ಸಂದರ್ಭದಲ್ಲಿ ಈ ಒಂದು ಚಿತ್ರ ಹಾಗೂ ಪೋಸ್ಟ್ ಸಾಕಷ್ಟು ಚರ್ಚೆಯ ವಸ್ತುವಾಗಿದೆ.

ಐಎಎಸ್ ಅಧಿಕಾರಿಗಳ ಸೇವೆಯನ್ನು `ಅಗತ್ಯ ಸೇವೆ' ಎಂದು ಪರಿಗಣಿಸಬೇಕೇ, ಅವರಿಗೆ ಪಿಪಿಇ ಅಗತ್ಯವಿದೆಯೇ? ವೈದ್ಯರುಗಳಿಗೆ ಅವುಗಳನ್ನು ಆದ್ಯತೆಯ ಮೇಲೆ ನೀಡಬೇಕಲ್ಲವೇ ಎಂಬುದರ ಕುರಿತೂ ಚರ್ಚೆಗಳು ಗರಿಗೆದರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News