​ಉಡುಪಿ ಜಿಲ್ಲೆಯಲ್ಲಿ ಇನ್ನೂ 6 ಮಂದಿ ಐಸೋಲೇಷನ್ ವಾರ್ಡ್‌ಗೆ

Update: 2020-04-08 14:03 GMT

ಉಡುಪಿ, ಎ.8: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ಬುಧವಾರ ಮತ್ತೆ ಆರು ಮಂದಿ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ಇಬ್ಬರು ಪುರುಷರು ಕೋವಿಡ್ ಶಂಕಿತರಾಗಿದ್ದರೆ, ನಾಲ್ವರು (ಒಬ್ಬ ಪುರುಷ, ಮೂವರು ಮಹಿಳೆ ಯರು) ಉಸಿರಾಟದ ತೊಂದರೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಬುಧವಾರ ಕೇವಲ ಮೂವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರಲ್ಲಿ ಶಂಕಿತ ಕೋವಿಡ್-19ರ ಸೋಂಕಿಗಾಗಿ ಇಬ್ಬರು ಹಾಗೂ ಉಸಿರಾಟದ ತೊಂದರೆ ಎದುರಿಸುತ್ತಿರುವ ಒಬ್ಬರ ಸ್ಯಾಂಪಲ್ ಸೇರಿವೆ. ಇವರ ವರದಿ ನಾಳೆ ಸಿಗಲಿದೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಕಳೆದೆರಡು ದಿನಗಳಿಂದ ಬಾಕಿ ಉಳಿದಿರುವ ಒಟ್ಟು 64 ಮಂದಿಯಲ್ಲಿ 53 ಮಂದಿಯ ಸ್ಯಾಂಪಲ್‌ಗಳ ವರದಿ ಬುಧವಾರ ಬಂದಿವೆ. ಎಲ್ಲವೂ ಸೋಂಕಿಗೆ ನೆಗೆಟಿವ್ ಆಗಿವೆ. ಇನ್ನು ನಿನ್ನೆವರೆಗಿನ 11 ಸೇರಿದಂತೆ ಒಟ್ಟು 13 ಮಂದಿಯ ಸ್ಯಾಂಪಲ್‌ಗಳ ವರದಿ ಬಲು ಬಾಕಿ ಇದೆ ಎಂದವರು ತಿಳಿಸಿದರು.

ಇದರಿಂದಾಗಿ ಇದುವರೆಗೆ ಜಿಲ್ಲೆಯಿಂದ ಈವರೆಗೆ ಕಳುಹಿಸಿದ ಒಟ್ಟು 291 ಮಂದಿಯ ಸ್ಯಾಂಪಲ್‌ಗಳಲ್ಲಿ 277 ಮಂದಿಯ ವರದಿ ಬಂದಿವೆ. ಇವುಗಳಲ್ಲಿ 274 ನೆಗೆಟಿವ್ ಆಗಿ ಬಂದಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿದೆ ಎಂದು ಡಿಎಚ್‌ಓ ವಿವರಿಸಿದರು.

ಜಿಲ್ಲೆಯಲ್ಲಿ ಬುಧವಾರ 28 ಮಂದಿ ಕೋವಿಡ್-19ರ ತಪಾಸಣೆಗಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಒಟ್ಟು 2058 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 557 (ಇಂದು 67) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 1812 (19) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 152 ಮಂದಿ ಹೋಮ್ ಕ್ವಾರಂಟೈನ್ ಹಾಗೂ 80 ಮಂದಿ ಆಸ್ಪತ್ರೆ ಕ್ವಾರಂಟೈನ್‌ ನಲ್ಲಿದ್ದಾರೆ. ಇಂದು ಯಾರೂ ಆಸ್ಪತ್ರೆಯಿಂದ ಬಿಡುಗಡೆಗೊಂಡಿಲ್ಲ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.

ಸೋಂಕಿತನ ಮೊದಲ ಸ್ಯಾಂಪಲ್ ನೆಗೆಟಿವ್ 

ಉಡುಪಿ ಜಿಲ್ಲೆಯಲ್ಲಿ ಮೊದಲನೇಯವನಾಗಿ ಕೊರೋನ ವೈರಸ್ ಸೋಂಕು ಪತ್ತೆಯಾದ ಮಣಿಪಾಲದ 34 ವರ್ಷ ಪ್ರಾಯದ ಯುವಕನ ಮೊದಲ ಸ್ಯಾಂಪಲ್ ವರದಿ ನೆಗೆಟಿವ್ ಆಗಿ ಬಂದಿದೆ. ಮಾ.26ರಂದು ಈತನಲ್ಲಿ ಸೋಂಕು ಪತ್ತೆಯಾಗಿದ್ದು, ಆತನಿಗೆ ಮೊದಲು ಕೆಎಂಸಿ ಹಾಗೂ ಬಳಿಕ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಈತ ಗುಣಮುಖನಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಈತನ ಗಂಟಲುದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇಂದು ಬಂದಿರುವ ವರದಿಯಲ್ಲಿ ಸೋಂಕಿಗೆ ನೆಗೆಟಿವ್ ಆಗಿದೆ. ಇಂದು ಎರಡನೇ ಸ್ಯಾಂಪಲ್‌ನ್ನು ಪರೀಕ್ಷೆಗಾಗಿ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾ ಗುವುದು. ಇದೂ ಸಹ ನೆಗೆಟಿವ್ ಬಂದರೆ ಸೂಕ್ತ ಸಮಯದಲ್ಲಿ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಲಾಗುವುದು ಎಂದು ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

ಇನ್ನು ಮುಂದೆ ಉಡುಪಿ ಜಿಲ್ಲೆಯ ಎಲ್ಲಾ ಶಂಕಿತರ ಗಂಟಲಿನ ದ್ರವನ್ನು ಪರೀಕ್ಷೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುವುದು. ಇದರಿಂದ ಕೇವಲ ಒಂದು ಗಂಟೆಯಲ್ಲಿ ವರದಿ ಸಿಗಲಿದೆ. ಇಂದಿನ ಮೂರು ಸ್ಯಾಂಪಲ್‌ಗಳನ್ನು ಮಂಗಳೂರಿಗೆ ಕಳುಹಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News