ಕೊರೋನ ವೈರಸ್: ವಲಸೆ ಕಾರ್ಮಿಕರ ಕಾಲನಿಗಳಲ್ಲಿ ಸಂಚರಿಸಲಿದೆ ಜಾಗೃತಿ ವಾಹನ

Update: 2020-04-08 14:05 GMT

ಉಡುಪಿ, ಎ.8: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಹಾಗೂ ಉಡುಪಿ ಕಾರ್ಮಿಕ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಇಂದು ಚಾಲನೆ ನೀಡಲಾದ ಕೊರೋನ ವೈರಸ್ ಜಾಗೃತಿ ಮಾಹಿತಿಯನ್ನೊಳಗೊಂಡ ಕೊರೋನ-19 ವಾಹನವು ಜಿಲ್ಲೆಯ 7 ತಾಲೂಕುಗಳಲ್ಲಿ ವಾಸವಾಗಿರುವ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರು ವಾಸವಾಗಿರುವ ಕಾಲೋನಿಗಳಲ್ಲಿ ಸಂಚರಿಸಿ ಸೋಂಕಿನ ಕುರಿತು ಜಾಗೃತಿ ಮೂಡಿಸಲಿದೆ.

ಜಾಗೃತಿ ವಾಹನದ ಕುರಿತು ಮಾಹಿತಿಯನ್ನು ನೀಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ ಎಂ., ಕೊರೋನ ಜಾಗೃತಿ ಅಭಿಯಾನದಂಗವಾಗಿ ಸಿದ್ಧ ಪಡಿಸಿದ ಕರಪತ್ರ, ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ಇದು ವಿತರಿಸಲಿದೆ. ಈಗಾಗಲೇ 80ಕ್ಕೂ ಅಧಿಕ ಗ್ರಾಪಂಗಳನ್ನು ಕ್ರಮಿಸಿ ಸುಮಾರು 1500ಕ್ಕೂ ಅಧಿಕ ಅಸಂಘಟಿತ ಕಾರ್ಮಿಕರ, ಹಿಂದುಳಿದ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ ಮತ್ತು ಕಟ್ಟಡ ಕಾರ್ಮಿಕರಿಗೆ, ಅಧಿಕೃತ ನೋಂದಾವಣೆಗೊಂಡಿರುವ 55ಕ್ಕೂ ಅಧಿಕ ಕೋವಿಡ್-19 ರೆಡ್‌ಕ್ರಾಸ್ ಸ್ವಯಂಸೇವಕರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ತರಬೇತಿ ನೀಡಲಾ ಗಿದೆ ಎಂದರು.

ಇಂದು ಚಾಲನೆ ಪಡೆದಿರುವ ಜಾಗೃತಿ ವಾಹನ, ಈಗಾಗಲೇ ಗುರುತಿಸಲ್ಪಟ್ಟ ಅಸಂಘಟಿತ ಕಾರ್ಮಿಕರ ವಲಸೆ ಕೇಂದ್ರಗಳಲ್ಲಿ ಪ್ರಮುಖವಾದ ಉಡುಪಿ ಬೀಡಿನಗುಡ್ಡೆ, ನಿಟ್ಟೂರು, ಅಲೆವೂರು ಮಣಿಪಾಲದ ಪ್ರಗತಿನಗರ, ರಾಜೀವ್ ನಗರ, ಸಂತೆಕಟೆ, ಬ್ರಹ್ಮಾವರ ಲೇಬರ್ ಕಾಲನಿ ಮತ್ತು ಸುತ್ತಲಿದ್ದ ಕಾರ್ಮಿಕರಿಗೆ, ಉಡುಪಿ ತಾಲೂಕಿನ ಬೋರ್ಡ್ ಹೈಸ್ಕೂಲು, ಹಾರಾಡಿ ಗಾಂಧಿನಗರ ಕಾಲನಿ, ಬೈಕಾಡಿ ಕಾಲನಿ ಮತ್ತು ಬಾರ್ಕೂರು ರುಕ್ಮಿಣಿ ಶೆಡ್ತಿ ಸರಕಾರಿ ಕಾಲೇಜು, ಕುಂದಾಪುರ ಮತ್ತು ಬೈಂದೂರು ತಾಲೂಕಿನ 18 ಗ್ರಾಪಂಗಳಿಗೆ, ಕುಂದಾಪುರ ಹಿಂದುಳಿದ ವರ್ಗಗಳ ಹಾಸ್ಟೆಲ್, ತಲ್ಲೂರು ಕಾಲನಿ, ಹೆಮ್ಮಾಡಿ ಕಾಲನಿ, ನಾಡಾ ಶೇಣಪುರ ಪ್ಯಾಕ್ಟರಿ ವರ್ಕರ್ಸ್‌ ಕಾಲನಿ, ಬೈಂದೂರು ತಾಲೂಕು ಅಫೀಸ್, ಅಂಬೇಡ್ಕರ್ ನಗರ, ಮರವಂತೆ ಕಾಲನಿ, ಕಂಬದಕೋಣೆ ಹೈವೇ ಕಾಲನಿ, ಕಾಳವರ ವರದರಾಜ್ ಸರಕಾರಿ ಕಾಲೇಜು, ರೈಲ್ವೆ ಸ್ಟೇಶನ್, ಮೂಡಲಕಟ್ಟ ಕಾಲನಿ, ಜನತಾ ಕಾಲನಿ ಬಸ್ರೂರು, ನೇರಳಕಟ್ಟೆ, ಕೋಟೇಶ್ವರ ಜನತಾ ಕಾಲನಿ, ಉಡುಪಿಯ ಮೂಡನಿಡಂಬೂರಿನ ಬಿಜಾಪುರ ಕಾಲನಿಗಳಲ್ಲಿರುವ 15,000ಕ್ಕೂ ಅಧಿಕ ಜನರಿಗೆ ಮಾಸ್ಕ್, ಸೋಪು, ಸ್ಯಾನಿಟೈಸರ್ ಮತ್ತು ಕೊರೊನಾ ನಿಯಂತ್ರಣ ಕುರಿತ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕರಪತ್ರಗಳನ್ನು ವಿತರಿಸಲಾಗಿದೆ. ಇನ್ನು 10,000 ಕ್ಕೂ ಅಧಿಕ ಮಾಸ್ಕ್, ಸೋಪು, ಸ್ಯಾನಿಟೈಸರ್‌ಗಳನ್ನು ವಿತರಿಸಲಾಗು ವುದು ಎಂದು ಬಾಲಕೃಷ್ಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News