ರಾಷ್ಟ್ರೀಯ ವಿಪತ್ತನ್ನು ರಾಜಕೀಯ ಧಾಳವಾಗಿ ಬಳಸುತ್ತಿರುವ ಆಡಳಿತ: ಕಾಂಗ್ರೆಸ್ ಆರೋಪ

Update: 2020-04-08 14:36 GMT

ಮಂಗಳೂರು, ಎ.8: ಮಂಗಳೂರು ಮಹಾನಗರ ಪಾಲಿಕೆಯ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಷ್ಟ್ರೀಯ ವಿಪತ್ತನ್ನು ರಾಜಕೀಯ ಧಾಳವಾಗಿ ಆಡಳಿತ ವರ್ಗ ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕೋಡ್ 19 ರಾಷ್ಟ್ರೀಯ ವಿಪತ್ತನ ಭಾದಕಗಳನ್ನು ಎದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ವತಿಯಿಂದ ರಚಿಸಲಾದ ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜೆ.ಆರ್ ಲೋಬೊ, ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್ ಬಜಾಲ್, ಕಾರ್ಪೊರೇಟರ್ ಶಶಿಧರ್ ಹೆಗ್ಡೆ, ಟಾಸ್ಕ್ ಫೋರ್ಸ್‌ನ ಸುಭೋದಯ ಆಳ್ವ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಜನಸಾಮಾನ್ಯರ ನೆಮ್ಮದಿಯ ಬದುಕಿಗಾಗಿ ಆಡಳಿತ ಪಕ್ಷವು ಸಕಾಲಿಕವಾಗಿ ಕ್ರಮ ತೆಗೆದುಕೊಳ್ಳಬೇಕು. ಸ್ಮಾರ್ಟ್ ಸಿಟಿಯಲ್ಲಿ ಕೇಂದ್ರ ಮಾರುಕಟ್ಟೆಯಲ್ಲಿದ್ದವರಿಗೆ ಅಂಗಡಿ ಮಳಿಗೆ ನೀಡಬೇಕೆಂಬ ನಿರ್ಧಾರವನ್ನು ಕೈಗೊಳ್ಳದೆ ಎಪಿಎಂಸಿ ಯಾರ್ಡ್‌ಗೆ ಸೆಂಟ್ರಲ್ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ಹಸಿದ ಹೊಟ್ಟೆಗೆ ತುತ್ತಿನ ವ್ಯವಸ್ಥೆಯನ್ನು ಮಾಡುವ ಬದಲು ಬಿಜೆಪಿ ನಾಯಕರು ಮನೆಮನೆಗೆ ಹೋಗಿ ಪಕ್ಷದ ಧ್ವಜವನ್ನು ನೀಡುತ್ತಾ ದೇಣಿಗೆ ಸಂಗ್ರಹಿಸುತ್ತಿರುವ ಆಡಳಿತ ಪಕ್ಷವು ರಾಷ್ಟ್ರೀಯ ವಿಪತ್ತನ್ನು ರಾಜಕೀಯ ಧಾಳವಾಗಿ ಬಳಸಿಕೊಂಡಿದೆ. ಮುಸ್ಲಿಮರು ಗ್ರಾಮ ಪ್ರವೇಶಕ್ಕೆ ಬಹಿಷ್ಕಾರ ಹಾಕಿ ಭಿತ್ತಿ ಪತ್ರಗಳನ್ನು ಹಚ್ಚುತ್ತಾ ಜಾತಿ, ಧರ್ಮಗಳ ನಡುವೆ ಕಂದಕಗಳನ್ನು ನಿರ್ಮಿಸಲು ಹೊರಟಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಶಾಸಕ ರೇಣುಕಾಚಾರ್ಯರಂತಹ ನಾಯಕರು ತಬ್ಲೀಗ್ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ, ಗುಂಡೇಟು ಹೊಡೆಯಬೇಕು ಎಂದು ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವವರ ವಿರುದ್ಧ ಪಕ್ಷ ಅಥವಾ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ತಬ್ಲೀಗ್ ಸಮಾವೇಶ ನಡೆಸಲು ಹಾಗೂ ವಿದೇಶದಿಂದ ಬರುವವರಿಗೆ ಅವಕಾಶ ಮಾಡಿ ಕೊಟ್ಟಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಎಂಬ ಕನಿಷ್ಟ ಜ್ಞಾನ ಇವರಿಗಿಲ್ಲದಿರುವುದು ವಿಪರ್ಯಾಸ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News