ಉಡುಪಿ: ಹಾಪ್‌ಕಾಮ್ಸ್‌ಗಳಲ್ಲಿ ಬೆ. 7ರಿಂದ ಹಣ್ಣು, ತರಕಾರಿ ಮಾರಾಟ -ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-04-08 15:26 GMT

ಉಡುಪಿ, ಎ.8: ನೋವೆಲ್ ಕೊರೋನ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಹೇರಲಾಗಿದ್ದರೂ, ಇದೀಗ ಕೆಲವೊಂದು ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ.

ರಾಜ್ಯದ ತೋಟಗಾರಿಕಾ ಇಲಾಖೆಯ ಅಂಗಸಂಸ್ಥೆಯಾಗಿರುವ ಹಾಪ್‌ಕಾಮ್ಸ್ ಸಂಸ್ಥೆಯು, ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ರೈತರಿಂದ ಖರೀದಿಸಿದ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಅನುವಾಗುವಂತೆ ಉಡುಪಿ ಜಿಲ್ಲೆಯ ಉಡುಪಿ ನಗರ, ಉಪ್ಪುಂದ ಹಾಗೂ ಕಾರ್ಕಳ ಆಸ್ಪತ್ರೆ ಆವರಣದಲ್ಲಿರುವ ಹಾಪ್‌ಕಾಮ್ಸ್ ಮಳಿಗೆ ಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿ ಜಿ.ಜಗದೀಶ್ ಅನುಮತಿ ನೀಡಿದ್ದಾರೆ.

ಈ ಮಳಿಗೆಗಳನ್ನು ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ಕನಿಷ್ಠ ಸಿಬ್ಬಂದಿ ಯೊಂದಿಗೆ ತೆರೆಯುವಂತೆ ಹಾಗೂ ಮಳಿಗೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಗಳಿಗೆ ಕೋವಿಡ್-19 ಸೋಂಕು ತಗಲಿಲ್ಲ ಹಾಗೂ ರೋಗ ಲಕ್ಷಣಗಳಿಲ್ಲ ಎಂಬು ದನ್ನು ದೃಢೀಕರಿಸಿಕೊಂಡು ಸೇವೆ ಪಡೆಯಬೇಕಾಗಿದೆ. ಕೋವಿಡ್-19 ಸೊಂಕು ಹರಡದಂತೆ ಅಗತ್ಯ ಮುಂಜಾಗೃತಾ ಕ್ರಮಗಳಾದ ಮಾಸ್ಕ್, ಗ್ಲೌಸ್, ಸ್ಯಾನಟೈಸರ್ ಗಳನ್ನು ಬಳಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

ಮಳಿಗೆಗಳಲ್ಲಿ ಮಾರಾಟ ಮಾಡುವ ಹಣ್ಣು ಮತ್ತು ತರಕಾರಿಗಳು ಉತ್ತಮ ಗುಣಮಟ್ಟ ಹೊಂದಿರಬೇಕು ಹಾಗೂ ನೈಜ ದರಗಳಲ್ಲಿ ಮಾರಾಟ ಮಾಡಬೇಕು. ಮಳಿಗೆಗಳಲ್ಲಿ ಮಾರಾಟ ಮಾಡುವ ಹಣ್ಣು ಮತ್ತು ತರಕಾರಿಗಳ ದರಪಟ್ಟಿಯನ್ನು ಮಳಿಗೆಯಲ್ಲಿ ಪ್ರದರ್ಶಿಸಬೇಕು. ಪ್ರತಿ ದಿನ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಖರೀದಿಸಿದ ಹಣ್ಣು ಮತ್ತು ತರಕಾರಿಗಳ ವಿವರ ಹಾಗೂ ರೈತರ ವಿವರ, ರೈತರಿಗೆ ನೀಡಿದ ದರ ಹಾಗೂ ಮಾರಾಟ ಮಾಡಿದ ದರದ ವಿವರವನ್ನು ತೋಟಗಾರಿಕಾ ಉಪನಿರ್ದೇಶಕರಿಗೆ ಒದಗಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News