ಕಾಣಿಯೂರು ಮಠದಿಂದ ಆಹಾರಕಿಟ್ ವಿತರಣೆ

Update: 2020-04-08 15:28 GMT

ಉಡುಪಿ, ಎ. 8: ಕೋವಿಡ್-19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ನಿರಾಶ್ರಿತರಿಗೆ ಕಾಣಿಯೂರು ಮಠದಿಂದ ಸುಮಾರು ಪಡಿತರ ಸಾಮಗ್ರಿಗಳಿರುವ 250 ಕಿಟ್‌ಗಳನ್ನು ಬುಧವಾರ ಜಿಲ್ಲಾಡಳಿತದ ಮೇಲುಸ್ತುವಾರಿಯಲ್ಲಿ ವಿತರಿಸಲಾಯಿತು.

ಕಿಟ್‌ನಲ್ಲಿ ಅಕ್ಕಿ, ಬೇಳೆ, ಬೆಲ್ಲ, ಸಕ್ಕರೆ, ಕೊತ್ತಂಬರಿ, ಚಹಾ ಹುಡಿ ಸೇರಿದಂತೆ ವಿವಿಧ ದಿನಸಿ ಸಾಮಾಗ್ರಿಗಳು ಒಳಗೊಂಡಿವೆ. ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಕಿಟ್‌ಗಳನ್ನು ಜನರಿಗೆ ವಿತರಿಸಲು ಶಾಸಕ ಕೆ.ರಘುಪತಿ ಭಟ್ ಹಾಗೂ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರಿಗೆ ಹಸ್ತಾಂತರಿಸಿದರು.

ಕೊರೋನ ಕಾಯಿಲೆ ಭಾರತ ಮಾತ್ರವಲ್ಲ ಜಗತ್ತಿನಿಂದ ತೊಡೆದು ಹೋಗಿ ಜಗತ್ತಿನಲ್ಲಿ ಮತ್ತೆ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಕಾಣಿಯೂರು ಸ್ವಾಮೀಜಿ ಈ ಸಂದರ್ಭದಲ್ಲಿ ಆಶಿಸಿದರು.

ಪ್ರಸಾದದ ರೂಪದಲ್ಲಿ ಮಠಮಂದಿರಗಳು ಸಂಕಷ್ಟದ ಸಮಯದಲ್ಲಿ ಬಡವರ ನೆರವಿಗೆ ಬರುತ್ತಿರುವುದು ಸಂತಸದ ವಿಷಯವಾಗಿದೆ. ಇವುಗಳನ್ನು ಅಗತ್ಯ ಫಲಾನುಭವಿಗಳಿಗೆ ತಲುಪಿಸಲು ಜಿಲ್ಲಾಧಿಕಾರಿಗಳು ಅಚ್ಚುಕಟ್ಟಿನ ವ್ಯವಸ್ಥೆ ಮಾಡಿದ್ದಾರೆ. ತಹಶೀಲ್ದಾರ್‌ರ ನೇತೃತ್ವದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಇವುಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದರು.

ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಮಠದ ಸಿಬಂದಿ ಸುಬ್ರಹ್ಮಣ್ಯ ಹೆಬ್ಬಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News