ಕೊರೋನ ಔಷಧ ರಫ್ತಿನ ಸಂದರ್ಭ ಭಾರತಕ್ಕೆ ಆದ್ಯತೆ ದೊರಕುತ್ತದೆಯೇ : ಟ್ರಂಪ್‌ಗೆ ಶಶಿ ತರೂರ್ ಪ್ರಶ್ನೆ

Update: 2020-04-08 16:22 GMT

ಹೊಸದಿಲ್ಲಿ, ಎ.8: “ನೀವು ಎದುರು ನೋಡುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪೂರೈಸಲು ಭಾರತ ನಿಸ್ವಾರ್ಥವಾಗಿ ಒಪ್ಪಿದೆ. ಮುಂದಿನ ದಿನದಲ್ಲಿ ಅಮೆರಿಕದ ಪ್ರಯೋಗಾಲಯಗಳಲ್ಲಿ ಕೊರೋನ ಸೋಂಕಿಗೆ ಔಷಧ ಸಿದ್ಧವಾದರೆ ಅದನ್ನು ವಿದೇಶಗಳಿಗೆ ಪೂರೈಸುವಾಗ ನೀವು ಭಾರತಕ್ಕೆ ಆದ್ಯತೆ ನೀಡುತ್ತೀರಾ” ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಮೆರಿಕ ಅಧ್ಯಕ್ಷರನ್ನು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಗೆಳೆತನದಲ್ಲಿ ಪ್ರತೀಕಾರದ ಮಾತು ಬರಬಾರದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಜೀವರಕ್ಷಕ ಔಷಧಿಗಳನ್ನು ಪೂರೈಸುವ ಸಂದರ್ಭ ಎಲ್ಲಾ ದೇಶಗಳಿಗೂ ನೆರವಾಗಬೇಕು. ಆದರೆ ಮೊದಲು ನಮ್ಮ ಅಗತ್ಯಕ್ಕೆ ಸಾಕಷ್ಟು ದಾಸ್ತಾನು ಇರಿಸಿಕೊಳ್ಳಬೇಕು ಎಂದವರು ಒತ್ತಾಯಿಸಿದ್ದಾರೆ.

ಕೊರೋನ ವೈರಸ್ ರೋಗಿಗಳನ್ನು ಉಪಚರಿಸುತ್ತಿರುವ ಆರೋಗ್ಯಸೇವೆಯ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಉತ್ತಮ ಎಂದು ಕಳೆದ ತಿಂಗಳು ಐಸಿಎಂಆರ್( ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ, ಈ ಔಷಧದ ರಫ್ತಿನ ಮೇಲೆ ಮಾರ್ಚ್ 25ರಂದು ಕೇಂದ್ರ ಸರಕಾರ ನಿಷೇಧ ವಿಧಿಸಿತ್ತು. ಕೊರೋನ ಸೋಂಕಿತರ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಪರಿಣಾಮಕಾರಿ ಎಂದು ಅಮೆರಿಕದ ಪ್ರಯೋಗಾಲಯ ತಿಳಿಸಿದೆ.

ಈ ಮಧ್ಯೆ, ತಕ್ಷಣ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಸದಿದ್ದರೆ ಪ್ರತೀಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ನೀಡಿದ ಬಳಿಕ, ಮಾನವೀಯ ನೆಲೆಯಲ್ಲಿ ಈ ಔಷಧದ ರಫ್ತಿಗೆ ಒಂದು ಬಾರಿಯ ವಿನಾಯಿತಿ ನೀಡುವುದಾಗಿ ತಿಳಿಸಿ ಅಮೆರಿಕ್ಕೆ ರಫ್ತು ಮಾಡಲು ಒಪ್ಪಿದೆ. ಇದೀಗ ಶ್ರೀಲಂಕಾ, ನೇಪಾಲ, ಬ್ರೆಜಿಲ್ ಮತ್ತಿತರ ದೇಶಗಳೂ ಇದೇ ರೀತಿಯ ಕೋರಿಕೆ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News