×
Ad

ಮೋದಿ ಗ್ರೇಟ್: ಟ್ರಂಪ್ ಗುಣಗಾನ

Update: 2020-04-08 22:35 IST

ಹೊಸದಿಲ್ಲಿ, ಎ.8: ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪೂರೈಸದಿದ್ದರೆ ಪ್ರತೀಕಾರದ ಕ್ರಮ ಎದುರಿಸಬೇಕು ಎಂದು ಭಾರತಕ್ಕೆ ಸೋಮವಾರ ಎಚ್ಚರಿಕೆ ನೀಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಮಾತ್ರೆಗಳು ಭಾರತದಿಂದ ಪೂರೈಕೆಯಾಗಿದೆ ಎಂಬುದು ಖಾತರಿಯಾಗುತ್ತಿದ್ದಂತೆಯೇ ತಮ್ಮ ವರಸೆ ಬದಲಿಸಿದ್ದು ಮೋದಿ ತುಂಬಾ ಗ್ರೇಟ್. ನಿಜವಾಗಿಯೂ ಬಹಳ ಒಳ್ಳೆಯ ಮನುಷ್ಯ ಎಂದು ಗುಣಗಾನ ಮಾಡಿದ್ದಾರೆ.

ಗುಜರಾತ್‌ನ ಮೂರು ಫ್ಯಾಕ್ಟರಿಗಳಿಂದ ಒಟ್ಟು 29 ಮಿಲಿಯನ್ ಡೋಸ್‌ನಷ್ಟು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಭಾರತ ಅಮೆರಿಕಕ್ಕೆ ರವಾನಿಸಿದ ಬಳಿಕ ಅಮೆರಿಕದ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, “ನಾನು 29 ಮಿಲಿಯನ್ ಡೋಸ್‌ಗಿಂತಲೂ ಹೆಚ್ಚು ಔಷಧ ಖರೀದಿಸಿದ್ದೇನೆ. ಇದರಲ್ಲಿ ಹೆಚ್ಚಿನ ಪಾಲು ಭಾರತದಿಂದ ಬಂದಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಮಾತನಾಡಿ ಔಷಧ ಕಳುಹಿಸಲು ಸಾಧ್ಯವೇ ಎಂದು ಅವರಲ್ಲಿ ಕೇಳಿದ್ದೆ. ಅವರು ತುಂಬಾ ಗ್ರೇಟ್. ಒಳ್ಳೆಯ ಮನುಷ್ಯ. ತಕ್ಷಣ ಒಪ್ಪಿ ಕಳುಹಿಸಿದ್ದಾರೆ” ಎಂದು ಹೇಳಿದ್ದಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸಿರುವುದು ಒಂದು ಮಹತ್ವದ ಘಟನೆ(ಗೇಮ್ ಚೇಂಜರ್) ಎಂದು ಟ್ರಂಪ್ ಬಣ್ಣಿಸಿದ್ದಾರೆ. ಕೊರೋನ ಸೋಂಕಿತರ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಪರಿಣಾಮಕಾರಿ ಎಂದು ಅಮೆರಿಕದ ಪ್ರಯೋಗಾಲಯ ತಿಳಿಸಿದ್ದು, ನ್ಯೂಯಾರ್ಕ್‌ನಲ್ಲಿ ಕನಿಷ್ಟ 1,500 ಕೊರೋನ ವೈರಸ್ ರೋಗಿಗಳಿಗೆ ಈ ಔಷಧದಿಂದ ಚಿಕಿತ್ಸೆ ನೀಡಲಾಗಿದೆ.

 ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ರಫ್ತಿನ ಮೇಲಿನ ನಿಷೇಧಕ್ಕೆ ಒಂದು ಬಾರಿಯ ವಿನಾಯಿತಿ ನೀಡಲಾಗಿದ್ದು ಅಮೆರಿಕಕ್ಕೆ ಮಾನವೀಯ ನೆಲೆಯಲ್ಲಿ ರಪ್ತು ಮಾಡಲಾಗುವುದು ಎಂದು ಕೇಂದ್ರ ಸರಕಾರ ಮಂಗಳವಾರ ಘೋಷಿಸಿದೆ. ಈ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಟೀಕೆ ಮಾಡಿದ್ದು , ಅಮೆರಿಕಕ್ಕೆ ಮಾತ್ರ ವಿಶೇಷ ವಿನಾಯಿತಿ ನೀಡಿರುವುದೇಕೆ ಎಂದು ಪ್ರಶ್ನಿಸಿವೆ.

ವಿಶ್ವದಲ್ಲಿ ಉತ್ಪಾದನೆಯಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ 70% ಔಷಧ ಭಾರತದಲ್ಲೇ ಉತ್ಪಾದನೆಯಾಗುತ್ತಿದೆ. ಈ ಮಧ್ಯೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಕೆಗೆ ಶ್ರೀಲಂಕಾ, ನೇಪಾಳ, ಬ್ರೆಜಿಲ್ ಮತ್ತಿತರ ದೇಶಗಳಿಂದ ಕೋರಿಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News