ವಿಶ್ವದ ವಿಸ್ಡನ್ ಪ್ರಮುಖ ಕ್ರಿಕೆಟಿಗ ಪ್ರಶಸ್ತಿ ಜಯಿಸಿದ ಬೆನ್ ಸ್ಟೋಕ್ಸ್

Update: 2020-04-09 05:07 GMT

ಲಂಡನ್, ಎ.8: ಕಳೆದ ವರ್ಷ ಇಂಗ್ಲೆಂಡ್ ಕ್ರಿಕೆಟ್ ತಂಡ ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ವಿಶ್ವದವಿಸ್ಡನ್ ಪ್ರಮುಖ ಕ್ರಿಕೆಟಿಗ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಪ್ರಾಬಲ್ಯ ಕೊನೆಗೊಂಡಿದೆ. ಕಳೆದ ಮೂರು ವರ್ಷಗಳಿಂದ ಕೊಹ್ಲಿ ಈ ಪ್ರಶಸ್ತಿ ಗೆಲ್ಲುತ್ತಾ ಬಂದಿದ್ದರು.

ಗುರುವಾರ ಪ್ರಕಟವಾದ ವಿಸ್ಡನ್ ಕ್ರಿಕೆಟಿಗರ ಅಲ್ಮಾನಾಕ್, ವಿಸ್ಫೋಟಕ ಆಲ್‌ರೌಂಡರ್ ಸ್ಟೋಕ್ಸ್ ರನ್ನು ವಿಶ್ವದ ಪ್ರಮುಖ ಆಟಗಾರನಾಗಿ ಕಿರೀಟಧಾರಣೆ ಮಾಡಿದೆ.

2005ರ ಬಳಿಕ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಇಂಗ್ಲೆಂಡ್‌ನ ಮೊದಲ ಆಟಗಾರ ಸ್ಟೋಕ್ಸ್. 2005ರಲ್ಲಿ ಆ್ಯಂಡ್ರೂ ಫ್ಲಿಂಟಾಫ್ ಈ ಸಾಧನೆ ಮಾಡಿದ್ದರು.

ಲಾರ್ಡ್ಸ್‌ನಲ್ಲಿ ನಡೆದಿದ್ದ ನ್ಯೂಝಿಲ್ಯಾಂಡ್ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 28ರ ಹರೆಯದ ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆ ಬಳಿಕ ಆಸ್ಟ್ರೇಲಿಯ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಔಟಾಗದೆ 135 ರನ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದರು.

 ‘‘ಕೆಲವೇ ವಾರಗಳ ಅಂತರದಲ್ಲಿ ಎರಡು ಬಾರಿ ಬೆನ್ ಸ್ಟೋಕ್ಸ್ ಅತ್ಯಮೋಘ ಪ್ರದರ್ಶನ ನೀಡಿದ್ದರು. ಮೊದಲಿಗೆ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ 15 ರನ್ ಗಳಿಸಿ ರನ್ ಚೇಸಿಂಗ್‌ನಲ್ಲಿ ತೊಡಗಿದ್ದ ಇಂಗ್ಲೆಂಡ್‌ಗೆ ಆಸರೆಯಾಗಿದ್ದರು. ಆ ನಂತರ ಹೆಡ್ಡಿಂಗ್ಲೆಯಲ್ಲಿ ನಡೆದ ಮೂರನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಶ್ರೇಷ್ಠ ಇನಿಂಗ್ಸ್ ಆಡಿದ್ದು, ಔಟಾಗದೆ 135 ರನ್ ಗಳಿಸಿ ಇಂಗ್ಲೆಂಡ್ 1 ವಿಕೆಟ್‌ಗಳ ಅಂತರದ ರೋಚಕ ಜಯ ಸಾಧಿಸಲು ನೆರವಾಗಿದ್ದರು. ಕೆಂಪು ಅಥವಾ ಬಿಳಿ ಚೆಂಡಿನಲ್ಲಿ ಅವರು ಉತ್ತಮವಾಗಿ ಆಡಬಲ್ಲರು’’ ಎಂದು ವಿಸ್ಡನ್ ಸಂಪಾದಕ ಲಾರೆನ್ಸ್ ಬೂತ್ ಹೇಳಿದ್ದಾರೆ.

ಸ್ಟೋಕ್ಸ್ ಜನವರಿಯಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ(ಐಸಿಸಿ) ವರ್ಷದ ಆಟಗಾರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ವಿಶ್ವಕಪ್ ಫೈನಲ್‌ನಲ್ಲಿ ಸೂಪರ್ ಓವರ್ ಎಸೆದಿದ್ದ ಇಂಗ್ಲೆಂಡ್‌ನ ವೇಗದ ಬೌಲರ್ ಜೋಫ್ರಾ ಆರ್ಚರ್ ವರ್ಷದ ಐವರು ವಿಸ್ಡನ್ ಕ್ರಿಕೆಟಿಗರ ಪೈಕಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ಆರ್ಚರ್ ಅವರೊಂದಿಗೆ ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್, ಮಾರ್ನಸ್ ಲಾಬುಶೇನ್,ಎಲ್ಲಿಸ್ ಪೆರ್ರಿ ಹಾಗೂ ದಕ್ಷಿಣ ಆಫ್ರಿಕಾದ ಸಂಜಾತ ಎಸ್ಸೆಕ್ಸ್ ಆಫ್-ಸ್ಪಿನ್ನರ್ ಸಿಮೊನ್ ಹಾರ್ಮರ್ ಅವರಿದ್ದಾರೆ.

ಪೆರ್ರಿ ಅವರು ಭಾರತದ ಸ್ಮತಿ ಮಂಧಾನರಿಂದ ವಿಶ್ವದ ಪ್ರಮುಖ ಮಹಿಳಾ ಕ್ರಿಕೆಟರ್ ಪ್ರಶಸ್ತಿಯನ್ನು ವಶಪಡಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News