ಲಾಕ್‌ಡೌನ್ ಎಫೆಕ್ಟ್: ರಸ್ತೆ ಬದಿ, ಫ್ಯಾಕ್ಟರಿ, ಗೋದಾಮುಗಳಲ್ಲಿ ಸಿಕ್ಕಿಹಾಕಿಕೊಂಡಿವೆ 3.5 ಲಕ್ಷ ಲಾರಿಗಳು

Update: 2020-04-09 05:30 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶಾದ್ಯಂತ ದಿಢೀರನೇ ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸುಮಾರು 35 ಸಾವಿರ ಕೋಟಿ ರೂ. ಮೌಲ್ಯದ ಸರಕುಗಳನ್ನು ತುಂಬಿರುವ ಸುಮಾರು 3.5 ಲಕ್ಷ ಲಾರಿಗಳು ರಸ್ತೆ ಬದಿ, ಫ್ಯಾಕ್ಟರಿಗಳ ಹೊರಗೆ ಮತ್ತು ಗೋದಾಮುಗಳಲ್ಲಿ ಸಿಕ್ಕಿಹಾಕಿಕೊಂಡಿವೆ.

ಕಾರು, ಎಸ್‌ಯುವಿ, ದ್ವಿಚಕ್ರ ವಾಹನಗಳು, ಹವಾನಿಯಂತ್ರಣ ಯಂತ್ರ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಎಲೆಕ್ಟ್ರಿಕಲ್ ಉಪಕರಣಗಳು ಮತ್ತು ಕೈಗಾರಿಕೆಗಳಿಗೆ ಬಳಕೆಯಾಗುವ ರಾಸಾಯನಿಕ, ಉಕ್ಕು ಮತ್ತು ಸಿಮೆಂಟ್‌ನಂಥ ಸರಕುಗಳನ್ನು ತುಂಬಿದ ಟ್ರಕ್‌ಗಳು ತ್ರಿಶಂಕು ಸ್ಥಿತಿಯಲ್ಲಿವೆ.

ಈ ಪೈಕಿ ಕೆಲ ಸರಕುಗಳಿಗೆ ಹಾನಿಯಾಗುವ ಅಪಾಯವಿದ್ದು, ಟ್ರಕ್ ಚಾಲಕರು ಹಾಗೂ ಸಹಾಯಕರಿಗೆ ಹಣ, ಆಹಾರ ಮತ್ತು ಶೌಚದ ವ್ಯವಸ್ಥೆ ಇಲ್ಲದ ಕಾರಣ ಅವರು ಟ್ರಕ್‌ಗಳನ್ನು ಮಾರ್ಗಮಧ್ಯದಲ್ಲೇ ಬಿಟ್ಟು ಹೋಗಿರುವುದರಿಂದ ಟ್ರಕ್‌ಗಳಲ್ಲಿ ತುಂಬಿರುವ ಸರಕು ಕಳ್ಳತನವಾಗುವ ಅಥವಾ ಸೋರಿಕೆಯಾಗುವ ಅಪಾಯವೂ ಇದೆ ಎಂದು ಸಾರಿಗೆ ಸಂಸ್ಥೆಗಳ ಮಾಲಕರು ಆತಂಕ ವ್ಯಕ್ತಪಡಿಸುತ್ತಾರೆ. ಹಲವು ಕಡೆಗಳಲ್ಲಿ ಫ್ಯಾಕ್ಟರಿ, ಗೋದಾಮುಗಳಿಗೆ ಲೋಡ್ ತಲುಪಿದರೂ ಈ ದಾಸ್ತಾನು ಅನ್‌ಲೋಡ್ ಮಾಡಲು ಸಹಾಯಕರು ಹಾಗೂ ಬೆಂಬಲ ಸಿಬ್ಬಂದಿಯೂ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಇದು ಟ್ರಕ್ ಮಾಲಕರಿಗೆ ತೀರಾ ನೋವುದಾಯಕ ಸ್ಥಿತಿ. ಕೋಟ್ಯಂತರ ರೂ. ಮೌಲ್ಯದ ಸರಕುಗಳು ಅಕ್ಷರಶಃ ರಸ್ತೆಯಲ್ಲಿ ಅನಾಥವಾಗಿವೆ. ಅವರ ನೆರವಿಗೆ ಸಂಬಂಧಪಟ್ಟವರು ಮುಂದಾಗಬೇಕು ಎಂದು ಅಖಿಲ ಭಾರತ ಮೋಟಾರು ಸಾರಿಗೆ ನಿಗಮದ ಅಧ್ಯಕ್ಷ ಕುಲತರಣ್ ಸಿಂಗ್ ಅತ್ವಾಲ್ ಹೇಳುತ್ತಾರೆ.

ಆಹಾರ ವಸ್ತು, ಔಷಧಿ ಮತ್ತು ನೈರ್ಮಲ್ಯ ಉತ್ಪನ್ನದಂಥ ವಸ್ತುಗಳ ಸಾಗಾಣಿಕೆಗೆ ಸರ್ಕಾರ ಅನುವು ಮಾಡಿಕೊಟ್ಟಿರುವ ಮಾದರಿಯಲ್ಲೇ, ಅರ್ಧದಲ್ಲಿ ಸಿಕ್ಕಿಹಾಕಿಕೊಂಡಿರುವ ವಾಹನಗಳು ತಮ್ಮ ಗಮ್ಯತಾಣ ತಲುಪಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎನ್ನುವುದು ಅವರ ಆಗ್ರಹ. ಹಲವು ಮಂದಿ ಚಾಲಕರು ಮತ್ತು ಸಹಾಯಕರು ಲಾರಿಗಳನ್ನು ಅರ್ಧದಲ್ಲೇ ಬಿಟ್ಟು ತೆರಳಿದ್ದಾರೆ. ಹಲವು ಕಡೆಗಳಲ್ಲಿ ಅವರಿಗೆ ಆಹಾರ, ಔಷಧಿ ಹಾಗೂ ಸ್ವಚ್ಛ ಶೌಚಾಲಯ, ಮಾಸ್ಕ್, ಸ್ಯಾನಿಟೈಸರ್ ಕೂಡಾ ಲಭ್ಯವಿಲ್ಲ. ಇದರಿಂದ ವಾಹನಗಳನ್ನು ಅಲ್ಲೇ ಬಿಟ್ಟು ಮನೆಗಳಿಗೆ ವಾಪಸ್ಸಾಗಿದ್ದಾಗಿ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News