ಎಲ್ಲ ಟ್ರೋಫಿಗಳನ್ನು ಮಾರಾಟಕ್ಕಿಟ್ಟು 4.30 ಲಕ್ಷ ರೂ. ಸಂಗ್ರಹಿಸಿದ ಅರ್ಜುನ್

Update: 2020-04-09 07:07 GMT

ಹೊಸದಿಲ್ಲಿ, ಎ.8: ಕೋವಿಡ್-19 ಪಿಡುಗಿನ ವಿರುದ್ಧ ಹೋರಾಡಲು ನಿಧಿ ಸಂಗ್ರಹಿಸುವ ಉದ್ದೇಶದಿಂದ ತಾನು ಗೆದ್ದಿರುವ ಎಲ್ಲ ಟ್ರೋಫಿಗಳನ್ನು ತನ್ನ ಸಂಬಂಧಿಕರು ಹಾಗೂ ಸ್ನೇಹಿತರು, ಹೆತ್ತವರಿಗೆ ಮಾರಾಟ ಮಾಡಿರುವ ಯುವ ಗಾಲ್ಫರ್ ಅರ್ಜುನ್ ಭಾಟಿ ಒಟ್ಟು 4.30 ಲಕ್ಷ ರೂ. ಸಂಗ್ರಹಿಸಿ ಗಮನ ಸೆಳೆದಿದ್ದಾರೆ.

15ರ ವಯಸ್ಸಿನ ಗಾಲ್ಫರ್ ಅರ್ಜುನ್ ಮೂರು ವಿಶ್ವ ಜೂನಿಯರ್ ಗಾಲ್ಫ್ ಚಾಂಪಿಯನ್‌ಶಿಪ್ ಪ್ರಶಸ್ತಿಗಳು ಹಾಗೂ ರಾಷ್ಟ್ರೀಯ ಚಾಂಪಿಯನ್‌ಶಿಪ್ ಸಹಿತ ತನ್ನ ಎಲ್ಲ ಪ್ರಶಸ್ತಿಗಳನ್ನು ಮಾರಾಟಕ್ಕಿಟ್ಟು ಕೋವಿಡ್-19 ವಿರುದ್ಧ ಸೆಣಸಾಟಕ್ಕೆ 4.30ಲಕ್ಷ ರೂ. ಒಟ್ಟುಗೂಡಿಸಿದ್ದಾರೆ. ಗ್ರೇಟರ್ ನೊಯ್ಡಾದ ಗಾಲ್ಫರ್ ಅರ್ಜುನ್ 2016 ಹಾಗೂ 2018ರಲ್ಲಿ ಅಮೆರಿಕ ಕಿಡ್ಸ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಕಳೆದ ವರ್ಷ ಎಫ್‌ಸಿಜಿ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಇದೀಗ ಪ್ರಶಸ್ತಿ ಮಾರಾಟದಿಂದ ಸಂಗ್ರಹಿಸಿರುವ ಹಣವನ್ನು ಪ್ರಧಾನಿ ಕೇರ್ ಫಂಡ್‌ಗೆ ನೀಡಿದ್ದಾರೆ. ‘‘ಕಳೆದ 8 ವರ್ಷಗಳಲ್ಲಿ ನಾನು ವಿಶ್ವದಾದ್ಯಂತ 102 ಟ್ರೋಫಿಗಳನ್ನು ಗೆದ್ದುಕೊಂಡಿದ್ದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ 102 ಜನರಿಗೆ ಈ ಪ್ರಶಸ್ತಿಯನ್ನು ಮಾರಾಟ ಮಾಡಿರುವೆ. ಇದರಿಂದ 4.30ಲಕ್ಷ ರೂ.ಸಂಗ್ರಹಿಸಿದ್ದೇನೆ’’ ಎಂದು ಹಿಂದಿಯಲ್ಲಿ ಅರ್ಜುನ್ ಟ್ವೀಟ್ ಮಾಡಿದ್ದಾರೆ.

‘‘ನನ್ನ ಕೊಡುಗೆಯನ್ನು ಕೇಳಿ ನನ್ನ ಅಜ್ಜಿ ಕಣ್ಣೀರು ಹಾಕಿದರು. ಆ ನಂತರ ನೀನು ರಿಯಲ್ ಅರ್ಜುನ್ ಆಗಿರುವೆ. ಈ ಸಮಯದಲ್ಲಿ ಜನರ ಜೀವ ಉಳಿಸುವುದು ಮುಖ್ಯ. ಟ್ರೋಫಿಗಳನ್ನು ಮುಂದಿನ ದಿನಗಳಲ್ಲಿ ಗೆಲ್ಲಬಹುದು’’ ಎಂದು ಸಮಾಧಾನಪಡಿಸಿದರು ಎಂದು ಅರ್ಜುನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News