ವಯನಾಡಿನಲ್ಲಿದ್ದ ಅಮೇಠಿಯ ಕಾರ್ಮಿಕರಿಗೆ ಸ್ಮೃತಿ ಇರಾನಿ ಸಹಾಯ ಮಾಡಿದ್ದಾರೆಂಬ ವರದಿಗಳು ಸುಳ್ಳು

Update: 2020-04-09 11:16 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರವಾಗಿರುವ ವಯನಾಡಿನಲ್ಲಿ ಸಿಲುಕಿದ್ದ ತಮ್ಮ ಅಮೇಠಿ ಕ್ಷೇತ್ರದ ಕೆಲ ವಲಸಿಗ ಕಾರ್ಮಿಕರಿಗೆ ಕೇಂದ್ರ ಜವುಳಿ ಸಚಿವೆ ಸ್ಮೃತಿ ಇರಾನಿ ಸಹಾಯಹಸ್ತ ಚಾಚಿದ್ದಾರೆಂದು ಕೆಲ ಮಾಧ್ಯಮಗಳು ಮಾಡಿರುವ ವರದಿಗಳು `ನಕಲಿ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಆರೆಸ್ಸೆಸ್ ಮುಖವಾಣಿ `ಆರ್ಗನೈಸರ್'ನಲ್ಲಿ ಎಪ್ರಿಲ್ 6ರಂದು ಪ್ರಕಟವಾದ ವರದಿಯಲ್ಲಿ ``ವಯನಾಡಿನಲ್ಲಿ ಸಿಲುಕಿದ್ದ ವಲಸಿಗ ಕಾರ್ಮಿಕರ ಪೈಕಿ ಇಬ್ಬರು ತಮ್ಮ ಸಮಸ್ಯೆಯನ್ನು ಅಮೇಠಿಯಲ್ಲಿರುವ ತಮ್ಮ  ಸ್ನೇಹಿತರ ಬಳಿ ಹೇಳಿಕೊಂಡಾಗ ಈ ವಿಚಾರ ಬೆಳಕಿಗೆ ಬಂತು. ಈ ವಿಚಾರ ತಿಳಿದುಕೊಂಡ ಸ್ಮೃತಿ ಇರಾನಿಯವರ ಕಚೇರಿ ಕೇಂದ್ರ ಸಚಿವ ಮುರಳೀಧರನ್ ಅವರ ಕಚೇರಿ ಹಾಗೂ ಸೇವಾ ಭಾರತಿ (ಆರೆಸ್ಸೆಸ್ ಅಂಗ ಸಂಸ್ಥೆ) ಇದರ ಕೇರಳ ಘಟಕದ ಜತೆ ಸಮನ್ವಯ ಸಾಧಿಸಿ ಮಾರ್ಚ್ 30ರಂದು ಕಾರ್ಮಿಕರನ್ನು ಸಂಪರ್ಕಿಸಿ ಅವರಿಗೆ ನಿರಂತರ ಆಹಾರ ಪೂರೈಕೆಯಾಗುಂತೆ ನೋಡಿಕೊಳ್ಳಲಾಯಿತು'' ಎಂದು ಬರೆಯಲಾಗಿತ್ತು.

ಈ ಕುರಿತಂತೆ ಸ್ಪಷ್ಟೀಕರಣ ನೀಡಿರುವ ಪಿಣರಾಯಿ ವಿಜಯನ್, ವಯನಾಡ್ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ  ಮಲಪ್ಪುರಂ ಜಿಲ್ಲೆಯ ಕರುವರಕುಂಡು ಎಂಬಲ್ಲಿ ವ್ಯಕ್ತಿಯೊಬ್ಬರ  ಕಟ್ಟಡದಲ್ಲಿ 41 ವಲಸಿಗ ಕಾರ್ಮಿಕರು ತಂಗಿದ್ದರು. ಅವರಿಗೆ ಹತ್ತಿರದ ಸಮುದಾಯ ಪಾಕಶಾಲೆಯಿಂದ ಆಹಾರ ಒದಗಿಸುವುದಾಗಿ ಹೇಳಲಾಗಿತ್ತಾದರೂ  ಅವರು ಹಾಗೂ ಅವರ ಮಾಲಿಕ ತಾವೇ ಆಹಾರದ ಏರ್ಪಾಟು ಮಾಡುವುದಾಗಿ ತಿಳಿಸಿದ್ದರು. ಆದುದರಿಂದ ಅಗತ್ಯ ವಸ್ತುಗಳಿರುವ 25 ಕಿಟ್‍ಗಳನ್ನು ಸರಕಾರ ಅಲ್ಲಿಗೆ ಕಳುಹಿಸಿತ್ತು'' ಎಂದು ಹೇಳಿದ್ದಾರೆ.

ವಲಸಿಗ ಕಾರ್ಮಿಕರಿಗೆ ಸಚಿವೆ ಸ್ಮೃತಿ ಇರಾನಿ ಕಚೇರಿ ಸಹಾಯ ಮಾಡಿದೆ ಎಂಬುದರ ಕುರಿತು ಸಚಿವೆ ಯಾ ಅವರ ಕಚೇರಿ ಏನನ್ನೂ ಹೇಳಿಲ್ಲವಾದರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News