'ಮತ್ತೆ ಕರ್ತವ್ಯಕ್ಕೆ ಮರಳಲು ಸಿದ್ಧ': ಕೊರೋನ ಸೋಂಕಿನಿಂದ ಗುಣಮುಖರಾದ ಕೇರಳದ ನರ್ಸ್

Update: 2020-04-09 11:23 GMT

ಕೊಟ್ಟಾಯಂ: ಕೊರೋನ ಸೋಂಕಿತ ದೇಶದ ಅತ್ಯಂತ ಹಿರಿಯ ದಂಪತಿ, ಈಗ ಗುಣಮುಖರಾಗಿರುವ 88 ವರ್ಷದ ಮರಿಯಮ್ಮ ಹಾಗೂ ಅವರ ಪತಿ 93 ವರ್ಷದ ಥಾಮಸ್ ಅವರ ಆರೈಕೆಯನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜಿನಲ್ಲಿ ಮಾಡಿದ್ದ ಹಾಗೂ ನಂತರ ಅದೇ ಸೋಂಕಿಗೊಳಗಾಗಿ ಈಗ ಗುಣಮುಖರಾಗಿರುವ 32 ವರ್ಷದ ನರ್ಸ್ ರೇಷ್ಮಾ ಮೋಹನ್‍ದಾಸ್, ಮತ್ತೆ ಕರ್ತವ್ಯದ ಕರೆಗೆ ಓಗೊಡಲು ಕಾತರದಿಂದ ಕಾದಿದ್ದಾರೆ.

ಕೊರೋನ ಸೋಂಕಿತ ಹಿರಿಯ ದಂಪತಿ ಕೊಟ್ಟಾಯಂ ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಅವರನ್ನು ನೋಡಿಕೊಂಡಿದ್ದ ರೇಷ್ಮಾ  14 ದಿನಗಳ ಕ್ವಾರಂಟೀನ್‍ ನಲ್ಲಿದ್ದರು. ಆದರೆ ಈ ನಡುವೆ ಅವರಲ್ಲಿ ಕೊರೋನ ಲಕ್ಷಣಗಳು ಕಾಣಿಸಿಕೊಂಡು ಪರೀಕ್ಷೆಗೊಳಗಾದಾಗ ಕೊರೋನ ಪಾಸಿಟಿವ್ ವರದಿಯಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎಪ್ರಿಲ್ 3ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಾಗ ಅಲ್ಲಿನ ಸಿಬ್ಬಂದಿಗಳಿಗೆಲ್ಲಾ ಗುಡ್ ಬೈ ಹೇಳಿ 'ಮತ್ತೆ ಆದಷ್ಟು ಬೇಗ ಕರ್ತವ್ಯಕ್ಕೆ ವಾಪಸಾಗುತ್ತೇನೆ' ಎಂದರು.

ತಿರುವನಂತಪುರಂನಲ್ಲಿ ತಮ್ಮ ನರ್ಸಿಂಗ್ ತರಬೇತಿ ಪೂರ್ಣಗೊಳಿಸಿದ್ದ ರೇಷ್ಮಾ ಈಗ ಕೊಟ್ಟಾಯಂನಲ್ಲಿ ತಮ್ಮ ಪತಿ ಹಾಗೂ ಅತ್ತೆಯೊಂದಿಗೆ ವಾಸವಾಗಿದ್ದಾರೆ.

"ಕೇರಳದ ಅತ್ಯುತ್ತಮ ಆರೋಗ್ಯ ಸೇವಾ ವ್ಯವಸ್ಥೆಯಿಂದ ಕೊರೋನ ವೈರಸ್ ಸೋಂಕನ್ನು ಯಶಸ್ವಿಯಾಗಿ ನಿಭಾಯಿಸುವುದು ಸಾಧ್ಯವಾಗಿದೆ. ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿ, ಆರೋಗ್ಯ ಸಚಿವೆಯಿಂದ ಹಿಡಿದು ಎಲ್ಲರೂ ಸಂಘಟಿತರಾಗಿ ಕಾರ್ಯನಿರ್ವಹಿಸಿ ಪ್ರತಿಯೊಂದು ಹಂತದಲ್ಲೂ ಭರವಸೆ ಮೂಡಿಸುತ್ತಾರೆ'' ಎಂದು  ರೇಷ್ಮಾ ವಿವರಿಸುತ್ತಾರೆ.

``ನಾನು ಕೊರೋನ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾದಾಗ ರಾಜ್ಯದ ಆರೋಗ್ಯ ಸಚಿವೆ ಕರೆ ಮಾಡಿ ನೀವು ಯಾವುದಕ್ಕೂ ಭಯಪಡಬೇಡಿ, ನಾವು ನಿಮ್ಮ ಜತೆಗಿದ್ದೇವೆ'' ಎಂದಿದ್ದರು ಎಂದು ಅವರು ನೆನಪಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News