ಲಾಕ್‌ಡೌನ್ ಎಫೆಕ್ಟ್ : ಆಹಾರ ವಸ್ತುಗಳ ಉತ್ಪಾದನೆ, ಸಾಗಾಟಕ್ಕೆ ಹೊಡೆತ !

Update: 2020-04-09 11:30 GMT
ಫೈಲ್ ಚಿತ್ರ

ಮಂಗಳೂರು, ಎ. 9: ಕೊರೋನ ಸೋಂಕು ಪ್ರಕರಣಗಳು ರಾಜ್ಯ, ದೇಶದಲ್ಲಿ ಏರಿಕೆಯಾಗುತ್ತಿರುವಂತೆಯೇ ಇದೀಗ ಆಹಾರ ವಸ್ತುಗಳ ಕೊರತೆಯ ಭೀತಿಯೂ ಕಾಡುತ್ತಿದೆ. ಲಾಕ್‌ಡೌನ್‌ನಿಂದಾಗಿ ಈಗಾಗಲೇ ಉತ್ಪಾದನೆ ಹಾಗೂ ಆಹಾರ ವಸ್ತುಗಳ ಸಾಗಾಟದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ಆಹಾರ ವಸ್ತುಗಳ ಭಾರೀ ಕೊರತೆಯನ್ನು ಎದುರಿಸಬೇಕಾದ ಭೀತಿ ಇದೆ.

ಕೊರೋನ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ದ.ಕ. ಜಿಲ್ಲೆಯಲ್ಲಿ ಬೆಳಗ್ಗ 7 ಗಂಟೆಯಿಂದ 12 ಗಂಟೆಯವರೆಗೆ ದಿನಸಿ ಸಾಮಗ್ರಿಗಳನ್ನು ಕೊಳ್ಳಲು ಸೂಪರ್ ಮಾರುಕಟ್ಟೆ ಸೇರಿದಂತೆ ದಿನಸಿ ಅಂಗಡಿಗಳಲ್ಲಿ ಅವಕಾಶವನ್ನು ಜಿಲ್ಲಾಡಳಿತ ನೀಡಿದೆ. ಆದರೆ ನಗರ ಪ್ರದೇಶದ ಅಂಗಡಿಗಳಲ್ಲಿ ದಿನಬಳಕೆಯ ವಸ್ತುಗಳ ಕೊರತೆ ದಿನೇ ದಿನೇ ಹೆಚ್ಚಾಗುತ್ತಿದೆ.

ತೊಗರಿಬೇಳೆ, ಹೆಸರು, ಉದ್ದು, ಕಡಲೆ ಸೇರಿದಂತೆ ಬೇಳೆ ಕಾಳುಕಾಳು ಹಾಗೂ ಗೋಧಿ, ಮೈದಾ ಸೇರಿದಂತೆ ಹಿಟ್ಟು ಪದಾರ್ಥಗಳ ದಾಸ್ತಾನು ಕಡಿಮೆಯಾಗುತ್ತಿದೆ. ಚಾಹುಡಿ, ಎಣ್ಣೆ, ಬೆಲ್ಲ, ಸಕ್ಕರೆ ಮೊದಲಾದ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗಿದ್ದು, ದಾಸ್ತಾನು ಕಡಿಮೆಯಾಗುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಸ್ಕರಣಾ ಘಟಕಗಳು ಮುಚ್ಚಿರುವುದು ಹಾಗೂ ಆಹಾರ ವಸ್ತು ಗಳನ್ನು ಸಾಗಿಸುವ ಲಾರಿ, ಟ್ರಕ್ಕ್‌ಗಳ ಪ್ರಮಾಣವೂ ಇಳಿಕೆಯಾಗಿರುವುದು ಇದಕ್ಕೆ ಕಾರಣವೆನ್ನಲಾಗುತ್ತಿದೆ.

ಸದ್ಯ ಆಹಾರ ಉತ್ಪಾದನಾ ಘಟಕಗಳ ಕಾರ್ಯಾಚರಣೆಗೆ ಅವಕಾಶವಿದೆಯಾದರೂ, ಕಾರ್ಮಿಕರ ಸಂಖ್ಯೆಯನ್ನು ಮಿತಗೊಳಿಸ ಲಾಗಿದೆ. ಇದರಿಂದಾಗಿ ಆಹಾರ ಸಂಸ್ಕರಣಾ ಮಿಲ್‌ಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಲಾರಿಗಳವರು ರಸ್ತೆಗಳಿಯಲು ಹಿಂದೇಟು ಹಾಕುತ್ತಿದ್ದಾರೆ. ಹೋಲ್‌ಸೇಲ್ ಖರೀದಿದಾರರಿಗೆ ಆಹಾರ ಸಾಮಗ್ರಿಗಳ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿ ಇಳಿಕೆ ಯಾಗಿದ್ದು, ಇದರಿಂದಾಗಿ ಚಿಲ್ಲರೆ ವ್ಯಾಪಾರಸ್ಥರಿಗೂ ತೊಂದರೆಯಾಗಿದೆ. ಪದಾರ್ಥಗಳ ಸಾಗಾಟ, ಪೂರೈಕೆ ಕಡಿಮೆ ಯಾಗುತ್ತಿರುವಂತೆಯೇ ಬೆಲೆಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸುಮಾರು ಒಂದು ತಿಂಗಳ ಹಿಂದೆ ಕೆಜಿಗೆ 80 ರಿಂದ 100 ರೂ.ಗಳಿಗೆ ಸಿಗುತ್ತಿದ್ದ ಹೆಸರು ಬೇಳೆ ಪ್ರಸ್ತುತ 180 ರೂ.ಗಳಿಗೆ ಮಾರಾಟವಾಗುತ್ತಿದೆ. ಇದರೊಂದಿಗೆ ತೊಗರಿ ಬೇಳೆ, ಉದ್ದು, ಅಕ್ಕಿಯ ಬೆಲೆಯೂ ಏರಿಕೆಯಾಗುತ್ತಿದೆ.

ಲಾಕ್‌ಡೌನ್‌ನ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಬಹು ಮುಖ್ಯವಾಗಿ ಕಾರ್ಮಿಕರು, ಬಡವರಿಗೆ ಆಹಾರ ಪದಾರ್ಥಗಳನ್ನು ಜಿಲ್ಲಾಡಳಿತ, ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ನೀಡುತ್ತಿರುವುದರಿಂದಲೂ ಹೋಲ್‌ಸೇಲ್ ಮಾರಾಟಗಾರರಿಂದ ಭಾರೀ ಪ್ರಮಾಣದಲ್ಲಿ ಅಗತ್ಯ ವಸ್ತುಗಳು ದಾನಿಗಳ ಮೂಲಕ ಕಿಟ್ ರೂಪದಲ್ಲಿ ವಿತರಣೆಯಾಗುತ್ತಿದೆ.

ಲಾಕ್‌ಡೌನ್ ಹೀಗೆ ಮುಂದುವರಿದಲ್ಲಿ, ಆಹಾರ ವಸ್ತುಗಳಿಗೆ ಜನರಿಂದ ಪರದಾಟ ಸೃಷ್ಟಿಯಾಗುವ ಆತಂಕ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News