​ಯಕ್ಷಗಾನ ಕಲಾವಿದ ಶಿವಣ್ಣ ಆಚಾರ್ಯ ಕುರ್ನಾಡು ನಿಧನ

Update: 2020-04-09 11:34 GMT

ಕೊಣಾಜೆ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಯಕ್ಷಗಾನ ಕಲಾವಿದ ಕುರ್ನಾಡು ನಿವಾಸಿ  ಶಿವಣ್ಣ ಆಚಾರ್ಯ ಕುರ್ನಾಡು ಬೆಟ್ಟು (78) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ವಿಟ್ಲ ಸಮೀಪ ಕೇಪು ಗ್ರಾಮದ ಪುಣಚದಲ್ಲಿ 1942ರಲ್ಲಿ ಜನಿಸಿದ ಇವರಿಗೆ ಪುಣಚ ಮಹಿಷಮರ್ಧಿನಿ ಯಕ್ಷಗಾನ ಸಂಘದ ಒಡನಾಟದಿಂದ ಯಕ್ಷಗಾನದ ಸಂಪರ್ಕವಾಯಿತು. ಪುಳಿಂಚ ಶೆಟ್ಟಿವರಿಂದ ಹೆಜ್ಜೆಗಾರಿಕೆ, ಚಿಕ್ಕಪ್ಪ ಶ್ರೀನಿವಾಸ ಆಚಾರ್ಯರಿಂದ ಅರ್ಥಗಾರಿಕೆ ಪ್ರಾವೀಣ್ಯತೆ ಪಡೆದರು. ಕುರಿಯ ವಿಠಲ ಶಾಸ್ತ್ರಿಯವರ ಸಹವಾಸ, ಕೋಳ್ಯೂರು ನಾರಾಯಣ ಭಟ್ಟರಿಂದ ಯಕ್ಷಗಾನದ ಸೂಕ್ಷ್ಮಾತೀತ ವಿಚಾರಗಳನ್ನು ಕಲಿತು ಪರಿಪೂರ್ಣ ಸ್ತ್ರೀ ಕಲಾವಿದರಾದರು.

ಧರ್ಮಸ್ಥಳ ಮೇಳದಿಂದ ತಿರುಗಾಟ ಆರಂಭಿಸಿ ಕೂಡ್ಲು, ಮುಲ್ಕಿ, ವೇಣೂರು, ಸುಂಕದಕಟ್ಟೆ, ಕಟೀಲು, ನಂದಾವರ, ಅಡ್ಯಾರು, ತಲಕಳ ಮತ್ತಿತರ ಸುಮಾರು 10ಕ್ಕೂ ಅಧಿಕ ಮೇಳಗಳಲ್ಲಿ ಸುಮಾರು 38 ವರ್ಷಗಳ ಕಾಲ ವೃತ್ತಿಪರ ಕಲಾವಿದರಾಗಿ ತಿರುಗಾಟ ನಡೆಸಿದ್ದಾರೆ.

ಪ್ರಸಾಧನ ಕಲಾವಿರಾಗಿಯೂ ಸೇವೆ

ಹೂಹಾಕುವಕಲ್ಲು ಶ್ರೀ ಭಾರತಿ ಕಲಾ ಆರ್ಟ್ಸ್ ಮತ್ತಿತರ ವೇಷಭೂಷಣ ತಂಡಗಳಲ್ಲಿ ಪ್ರಸಾಧನ ಕಲಾವಿದರಾಗಿ ಹಲವು ವರ್ಷ ಕಾರ್ಯನಿರ್ವಹಿಸಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಇವರ ಕಲಾಸೇವೆಯನ್ನು ಗುರುತಿಸಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ 50ಕ್ಕಿಂತಲೂ ಅಧಿಕ ಪುರಸ್ಕಾರಗಳು ಸಂದಿವೆ. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News