ಕೊರೋನ ಹೆಸರಿನಲ್ಲಿ ಬ್ಯಾಂಕ್ ಖಾತೆಯ ಹಣ ದೋಚುತ್ತಿರುವ ಅನಾಮಿಕರು: ಎಚ್ಚರಿಕೆ

Update: 2020-04-09 12:46 GMT

ಉಡುಪಿ, ಎ. 9: ಜನ ಸಾಮಾನ್ಯರು ನೋವೆಲ್ ಕೊರೋನ ವೈರಸ್ ತಂದೊಡ್ಡಿರುವ ವಿವಿಧ ಸಂಕಷ್ಟಗಳನ್ನು ಎದುರಿಸುವಲ್ಲಿ ತಮ್ಮೆಲ್ಲಾ ಗಮನವನ್ನು ಕೇಂದ್ರೀಕರಿಸಿರುವಂತೆ, ಜನರನ್ನು ನಾನಾ ರೀತಿಯಲ್ಲಿ ವಂಚಿಸುವವರ ಗುಂಪೊಂದು ಕೊರೋನದ ನೆಪದಲ್ಲಿ ಜನರ ಬ್ಯಾಂಕ್ ಖಾತೆಯನ್ನು ದೋಚುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಕಾರ್ಯನಿರತರಾಗಿದ್ದಾರೆ.

ಈ ಕುರಿತು ಬ್ಯಾಂಕ್ ಆಫ್ ಬರೋಡದ (ಹಿಂದಿನ ವಿಜಯಾ ಬ್ಯಾಂಕ್) ಉಡುಪಿ ವಲಯದ ಡಿಜಿಎಂ ರವೀಂದ್ರ ರೈ ಅವರು ಜನಸಾಮಾನ್ಯರನ್ನು ಎಚ್ಚರಿಸಿದ್ದಾರೆ.

ಜನರನ್ನು ಇಂಥ ವಂಚಕರ ಕುರಿತಂತೆ ಎಚ್ಚರಿಸಿರುವ ರೈ, ಅವರು ಬಿಡುಗಡೆ ಮಾಡಿರುವ ವಿಡಿಯೋ ಒಂದರಲ್ಲಿ ತಮ್ಮ ಮೊಬೈಲ್‌ಗೆ ಬರುವ ಯಾವುದೇ ಓಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.

ಕೊರೋನ ಜೊತೆಜೊತೆಗೆ ಈಗ ಮತ್ತೊಂದು ಅಪಾಯಕಾರಿ ಸೋಂಕು ಸಕ್ರಿಯವಾಗಿದ್ದು, ಇದರಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕಾಣದಂತೆ ಮಾಯವಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.

ಕೊರೋನದ ಸಂಕಷ್ಟದ ಸಮಯದಲ್ಲಿ ನಿಮ್ಮ ಮೊಬೈಲ್‌ಗೆ ಅನಾಮಿಕ ಕರೆ ಬರುತ್ತದೆ. ಅದರಲ್ಲಿ ಕೊರೋನ ಸಂಕಷ್ಟ ಪರಿಹಾರ ಹಣವನ್ನು ನೀಡುತ್ತೇವೆ ಅಂತಾರೆ. ನಿಮ್ಮ ಒಟಿಪಿ ನಂಬರ್ ಕೊಡಿ, ತಕ್ಷಣ ಹಣ ಹಾಕ್ತಿವಿ ಅಂತಾರೆ. ನೀವು ನಿಮ್ಮ ಒಟಿಪಿ ನಂಬರ್ ಅವರಿಗೆ ನೀಡಿದರೆ, ತಕ್ಷಣವೇ ನಿಮ್ಮ ಖಾತೆಯಲ್ಲಿದ್ದ ಹಣ ಖಾಲಿಯಾಗುತ್ತದೆ ಎಚ್ಚರ ಎಂದು ರವೀಂದ್ರ ರೈ ಹೇಳಿದ್ದಾರೆ. ಅದೇ ರೀತಿ ಕೊರೋನ ಹಿನ್ನೆಲೆಯಲ್ಲಿ ಮೂರು ತಿಂಗಳು ನಿಮ್ಮ ಲೋನ್ ಇಎಂಐ ತೆಗೆಯಲ್ಲ ಅಂತಾರೆ. ಲೋನ್ ನೆಪದಲ್ಲೂ ಅನಾಮಿಕರು ಒಟಿಪಿ ಕೊಡಿ ಎಂದು ಕೇಳುತ್ತಾರೆ. ನೀವು ಏನೊಂದೂ ಯೋಚಿಸದೇ ಒಟಿಪಿ ನೀಡಿದರೆ ಅಲ್ಲೂ ನಿಮ್ಮ ಆ ಖಾತೆಯಲ್ಲಿದ್ದ ಹಣ ಮಂಗಮಾಯವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಗ್ರಾಹಕರು ಒಂದು ವಿಷಯವನ್ನು ಚೆನ್ನಾಗಿ ನೆನಪಿಡಬೇಕು. ಯಾವ ಬ್ಯಾಂಕ್ ಕೂಡಾ ತನ್ನ ಗ್ರಾಹಕರಿಂದ ಪೋನ್‌ನಲ್ಲಿ ಒಟಿಪಿ, ಪಿನ್ ನಂಬರ್ ಕೇಳುವುದಿಲ್ಲ. ಇದನ್ನು ಕೇಳಿ ಯಾರೇ ಕರೆ ಮಾಡಿದರೂ ಅವರೊಂದಿಗೆ ಒಟಿಪಿ ಆಗ್ಲಿ, ಪಿನ್ ನಂಬರ್ ಆಗ್ಲಿ ಹಂಚಿಕೊಳ್ಳಬೇಡಿ ಎಂದು ರೈ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News