ಉಡುಪಿ: ಕೊರೋನ ವೈರಸ್ ಸೋಂಕು ಪರೀಕ್ಷೆಗೆ 30 ಮಂದಿಯ ಸ್ಯಾಂಪಲ್

Update: 2020-04-09 14:18 GMT

ಉಡುಪಿ, ಎ.9: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ಇನ್ನೂ 30 ಮಂದಿಯ ಸ್ಯಾಂಪಲ್‌ನ್ನು ಗುರುವಾರ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವುಗಳಲ್ಲಿ ಶಂಕಿತ ಕೋವಿಡ್-19ರ ಸೋಂಕಿ ಗಾಗಿ ಇಬ್ಬರು, ಶಂಕಿತರ ಸಂಪರ್ಕಕ್ಕೆ ಬಂದ 24 ಮಂದಿ ಹಾಗೂ ತೀವ್ರ ರೀತಿಯ ಉಸಿರಾಟದ ತೊಂದರೆಗಾಗಿ ನಾಲ್ವರ ಸ್ಯಾಂಪಲ್‌ಗಳು ಸೇರಿವೆ. ವರದಿ ನಾಳೆ ಕೈಸೇರುವ ನಿರೀಕ್ಷೆ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಅಲ್ಲದೇ ಗುರುವಾರ ಒಟ್ಟು 13 ಮಂದಿ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ನಾಲ್ವರು ಪುರುಷರು ಮತು ಮೂವರು ಮಹಿಳೆಯರು ಕೋವಿಡ್ ಶಂಕಿತರಾಗಿದ್ದರೆ, ಆರು ಮಂದಿ (ಐವರು ಪುರುಷ, ಓರ್ವ ಮಹಿಳೆ) ಉಸಿರಾಟದ ತೊಂದರೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರು ತಿಳಿಸಿದರು.

ಕಳೆದೆರಡು ದಿನಗಳಿಂದ ಬಾಕಿ ಉಳಿದಿರುವ ಒಟ್ಟು 14 ಮಂದಿಯಲ್ಲಿ 11 ಮಂದಿಯ ಸ್ಯಾಂಪಲ್‌ಗಳ ವರದಿ ಗುರುವಾರ ಬಂದಿವೆ. ಎಲ್ಲವೂ ಸೋಂಕಿಗೆ ನೆಗೆಟಿವ್ ಆಗಿವೆ. ಇದರಿಂದ ಇಂದು ಕಳುಹಿಸಿದ 30 ಮಂದಿಯ. ಸ್ಯಾಂಪಲ್ ಸೇರಿದಂತೆ ಒಟ್ಟು 33 ಮಂದಿಯ ಸ್ಯಾಂಪಲ್‌ಗಳ ವರದಿ ಬಲು ಬಾಕಿ ಇದೆ ಎಂದವರು ತಿಳಿಸಿದರು.

ಈ ಮೂಲಕ ಜಿಲ್ಲೆಯಿಂದ ಈವರೆಗೆ ಕಳುಹಿಸಿದ ಒಟ್ಟು 321 ಮಂದಿಯ ಸ್ಯಾಂಪಲ್‌ಗಳಲ್ಲಿ 288 ಮಂದಿಯ ವರದಿ ಬಂದಿವೆ. ಇವುಗಳಲ್ಲಿ 285 ನೆಗೆಟಿವ್ ಆಗಿ ಬಂದಿದ್ದರೆ, ಇದುವರೆಗೆ ಮೂವರದ್ದು ಮಾತ್ರ ಪಾಸಿಟಿವ್ ಆಗಿವೆ ಎಂದು ಡಿಎಚ್‌ಓ ವಿವರಿಸಿದರು.

ಜಿಲ್ಲೆಯಲ್ಲಿ ಬುಧವಾರ 14 ಮಂದಿ ಕೋವಿಡ್-19ರ ತಪಾಸಣೆಗಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2072 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 649 (ಇಂದು 92) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 1816 (4) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 165 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 55 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ. ಇಂದು 36 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.

ತರಬೇತಿ: ಈ ನಡುವೆ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಅನುಷ್ಠಾನಾಧಿ ಕಾರಿಗಳಿಗೆ, ನಗರಸಭಾ ಪೌರಕಾರ್ಮಿಕರಿಗೆ ಇಂದು ತರಬೇತಿಯನ್ನು ನೀಡ ಲಾಯಿತು. ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರು ಇಂದು ಕಾರ್ಕಳದ ತಾಲೂಕಿನ ಬೈಲೂರು, ಬೆಳ್ಮಣ್, ಇರ್ವತ್ತೂರು, ದುರ್ಗಾ, ಉಡುಪಿ ತಾಲೂಕಿನ ಬ್ರಹ್ಮಾವರ, ಬಾರಕೂರು, ಪೆರ್ಣಂಕಿಲ, ಸಾಸ್ತಾನ, ಕುಂದಾಪುರ ತಾಲೂಕಿನ ಕಿರಿಮಂಜೇಶ್ವರ, ಗಂಗೊಳ್ಳಿ, ನಾಡ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕೋವಿಡ್-19 ಕುರಿತು ಜಾಗೃತಿ ಕರಪತ್ರಗಳನ್ನು ಹಂಚಿಸಿದರು. ಹೋಮ್ ಕ್ವಾರಂಟೈನ್‌ನಲ್ಲಿ ರುವವರ ಆರೆಗ್ಯವನ್ನೂ ಅವರು ವಿಚಾರಿಸಿದರು.

ಶುಕ್ರವಾರ ಮತ್ತಿಬ್ಬರು ಸೋಂಕಿತರ ಸ್ಯಾಂಪಲ್ ಪರೀಕ್ಷೆಗೆ

ಉಡುಪಿ ಜಿಲ್ಲೆಯಲ್ಲಿ ಮೊದಲನೇಯವನಾಗಿ ಕೊರೋನ ವೈರಸ್ ಸೋಂಕು ಪತ್ತೆಯಾದ ಮಣಿಪಾಲದ 34 ವರ್ಷ ಪ್ರಾಯದ ಯುವಕನ ಎರಡನೇ ಸ್ಯಾಂಪಲ್‌ನ ನಿರೀಕ್ಷಿತ ವರದಿ ಇಂದು ಬಂದಿಲ್ಲ. ಮಂಗಳೂರಿನಿಂದ ಅದು ನಾಳೆ ಬರುವ ನಿರೀಕ್ಷೆ ಇದೆ ಎಂದು ಡಾ.ಸೂಡ ತಿಳಿಸಿದರು.

ಈತನಲ್ಲಿ ಮಾ.26ರಂದು ಸೋಂಕು ಪತ್ತೆಯಾಗಿದ್ದು, ಈಗ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಗುಣಮುಖನಾದ ಹಿನ್ನೆಲೆಯಲ್ಲಿ ಸೋಮವಾರ ಇವನ ಮೊದಲ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಬುಧವಾರ ಅದರ ವರದಿ ನೆಗೆಟಿವ್ ಆಗಿ ಬಂದಿದೆ. ನಿನ್ನೆ ಸಂಜೆ ಆತನ ಎರಡನೇ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.ಇದೂ ಸಹ ನೆಗೆಟಿವ್ ಬಂದರೆ, 14 ದಿನಗಳ ಬಳಿಕ ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಬಹುದಾಗಿದೆ ಎಂದವರು ವಿವರಿಸಿದರು.

ಈ ನಡುವೆ ಮಾ.29ರಂದು ಸೋಂಕು ಪತ್ತೆಯಾದ ಉಡುಪಿ ಆಸುಪಾಸಿನ ಮತ್ತಿಬ್ಬರು ಯುವಕರ ಮೊದಲ ಸ್ಯಾಂಪಲ್‌ನ್ನು ಶುಕ್ರವಾರ ಪರೀಕ್ಷೆಗಾಗಿ ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಡಾ.ಸುಧೀರ್ ಚಂದ್ರ ಸೂಡ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News