ಆರ್ಕ್ ಟಿಕ್ ಮೇಲಿನ ಓಝೋನ್ ಪದರದಲ್ಲಿ ದಾಖಲೆ ಗಾತ್ರದ ರಂಧ್ರ ಗೋಚರ !

Update: 2020-04-09 14:36 GMT

ಲಂಡನ್ : ಆರ್ಕ್ ಟಿಕ್ ಮೇಲಿರುವ ಓಝೋನ್ ಪದರದಲ್ಲಿ ಅತ್ಯಂತ ವಿರಳ ರಂಧ್ರವೊಂದು ಗೋಚರವಾಗಿದೆ. ಉತ್ತರ ಧ್ರುವದಿಂದ ಮೇಲಿರುವ ವಾತಾವರಣದಲ್ಲಿ ಅಸಾಮಾನ್ಯವಾದ ಕಡಿಮೆ ತಾಪಮಾನಗಳ ಪರಿಣಾಮವಾಗಿ ಈ ರಂಧ್ರ ಉಂಟಾಗಿರಬಹುದೆಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ವಿಜ್ಞಾನಿಗಳು ಆಗಸ ಹಾಗೂ ಭೂಮಿಯಿಂದ ಈ ರಂಧ್ರವನ್ನು ಪರಿಶೀಲಿಸುತ್ತಿದ್ದು ಅದರ ಗಾತ್ರ ದಾಖಲೆ ಆಯಾಮಗಳನ್ನು ತಲುಪಿದೆ. ಆದರೆ ಇದು ದಕ್ಷಿಣದತ್ತ ಸಾಗದೇ ಇದ್ದರೆ ಅದರಿಂದ ಮನುಷ್ಯರಿಗೆ ಯಾವುದೇ ಅಪಾಯ ಉಂಟಾಗದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೆ ಈ ರಂಧ್ರ ದಕ್ಷಿಣದತ್ತ, ಜನವಸತಿಯಿರುವ ಸ್ಥಳಗಳತ್ತ, ಅಂದರೆ ದಕ್ಷಿಣ ಗ್ರೀನ್ ಲ್ಯಾಂಡ್ ಮುಂತಾದ ಸ್ಥಳಗಳತ್ತ ವಿಸ್ತರಿಸಿದರೆ ಶಾಖಕ್ಕೆ ಜನರ ಮೈಸುಡಬಹುದು ಎನ್ನಲಾಗಿದೆ. ಈ ರಂಧ್ರವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ವಿಜ್ಞಾನಿಗಳು ಅದು ಇನ್ನು ಕೆಲವೇ ವಾರಗಳಲ್ಲಿ  ಮರೆಯಾಗಲಿದೆ ಎನ್ನುತ್ತಿದ್ದಾರೆ.

ಉತ್ತರ ಧ್ರುವ ಪ್ರಾಂತ್ಯದಲ್ಲಿ ಕಡಿಮೆ ತಾಪಮಾನದಿಂದಾಗಿ ಅಸಾಮಾನ್ಯ ಸ್ಥಿರ ಧ್ರುವದ ಸುಳಿ (ಪೋಲಾರ್ ವೋರ್ಟೆಕ್ಸ್) ಉಂಟಾಗಿದ್ದು ಮಾನವ ಚಟುವಟಿಕೆಗಳಿಂದ ವಾತಾವರಣದಲ್ಲಿ ಓಝೋನ್ ವಿನಾಶಕಾರಿ ರಾಸಾಯನಿಕಗಳಾದ ಕ್ಲೋರಿನ್ ಹಾಗೂ ಬ್ರೊಮೈನ್ ಉಪಸ್ಥಿತಿಯಿಂದಾಗಿ ಈ ರಂಧ್ರ  ಉಂಟಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೋವಿಡ್-19 ಸೋಂಕು ತಡೆಗಟ್ಟಲು ವಿಶ್ವದ ಹಲವೆಡೆ ಜಾರಿಗೊಳಿಸಲಾಗಿರುವ ಲಾಕ್‍ ಡೌನ್ ನಿಂದಾಗಿ ವಾಯುಮಾಲಿನ್ಯ ಬಹಳಷ್ಟು ಕಡಿಮೆಯಾಗಿದ್ದರಿಂದ ಈ ರಂಧ್ರ ಉಂಟಾಗಿಲ್ಲ ಎನ್ನುತ್ತಿರುವ ವಿಜ್ಞಾನಿಗಳು, ತಾಪಮಾನ ಏರಿಕೆಯಾಗಿ ಓಝೋನ್ ಪದರ ಕಡಿಮೆಯಾದಂತೆ ಈ ರಂಧ್ರ ಕೂಡ  ಮರೆಯಾಗಲಿದೆ ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News