ಸ್ವರ್ಣ ನದಿಯಲ್ಲಿ ನೀರಿನ ಹರಿವು ಇಳಿಕೆ: ಶಿರೂರು ಡ್ಯಾಂ ಬಳಿ ಪಂಪಿಂಗ್

Update: 2020-04-09 14:45 GMT

ಉಡುಪಿ, ಎ.9: ಉಡುಪಿ ನಗರಸಭೆಗೆ ನೀರು ಪೂರೈಸುವ ಸ್ವರ್ಣ ನದಿಯ ಶಿರೂರು ಡ್ಯಾಂ ಸಮೀಪದ ಬೊಮ್ಮರಬೆಟ್ಟು ಗ್ರಾಪಂ ವ್ಯಾಪ್ತಿಯ ಸಾಣೆಬೆಟ್ಟು ಎಂಬಲ್ಲಿ ನೀರಿನ ಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪಂಪ್‌ಗಳನ್ನು ಆಳವಡಿಸಿ, ನೀರನ್ನು ಹಾಯಿಸುವ ಕಾರ್ಯ ಇಂದಿನಿಂದ ಆರಂಭಿಸಲಾಗಿದೆ.

ಈ ಬಾರಿ ಉಡುಪಿ ನಗರಸಭೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗ ದಂತೆ ಟೆಂಡರ್ ಕರೆದು ಗುತ್ತಿಗೆದಾರರಿಗೆ ಈ ಕೆಲಸ ವಹಿಸಿಕೊಡಲಾಗಿದ್ದು, ಅದಕ್ಕಾಗಿ ಗಂಟೆಗೆ 1,117ರೂ. ಪಾವತಿಸಲಾಗುತ್ತದೆ. ಸದ್ಯ ಸಾಣೆಬೆಟ್ಟುವಿನಲ್ಲಿ ಬೆಳಗ್ಗೆ ಎರಡು ಪಂಪ್‌ ಗಳನ್ನು ಮತ್ತು ಸಂಜೆ ಒಂದು ಪಂಪ್‌ಗಳನ್ನು ಆಳವಡಿಸಿ ನೀರನ್ನು ಶಿೂರು ಡ್ಯಾಂಗೆ ಹಾಯಿಸಲಾಗುತ್ತಿದೆ.

ಇಲ್ಲಿ ಸುಮಾರು 15-20ದಿನಗಳಿಗೆ ಬೇಕಾದ ನೀರಿನ ಸಂಗ್ರಹ ಇದೆ. ನಂತರ ಶಿರೂರು ಡ್ಯಾಮ್ ಬಳಿ ಮತ್ತೆ ಎರಡು ಪಂಪ್‌ ಗಳನ್ನು ಆಳವಡಿಸಿ, ಒಟ್ಟು ಐದು ಪಂಪ್‌ಗಳ ಮೂಲಕ ನೀರು ಹಾಯಿಸುವ ಕಾರ್ಯ ಮಾಡಲಾಗುತ್ತದೆ. ಇದರಿಂದ ಬಜೆ ಡ್ಯಾಂನಲ್ಲಿ ನೀರು ಸಂಗ್ರಹ ಹೆಚ್ಚಾಗಲು ಸಹಕಾರವಾಗುತ್ತದೆ.

ಇಂದು ಸ್ಥಳಕ್ಕೆ ಆಗಮಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನ್‌ರಾಜ್, ಕಿರಿಯ ಅಭಿಯಂತರ ದುರ್ಗಾ ಪ್ರಸಾದ್ ಪಂಪಿಂಗ್ ಕಾರ್ಯವನ್ನು ಪರಿಶೀಲಿಸಿದರು.

‘ಕಳೆದ ವರ್ಷ ಮಾಡಿರುವ ತಪ್ಪು ನಿರ್ಧಾರದಿಂದಾಗಿ ಮೇ ತಿಂಗಳಲ್ಲಿ ಬಜೆ ಡ್ಯಾಂ ನೀರು ಸಂಪೂರ್ಣ ಖಾಲಿ ಆಗಿತ್ತು. ನದಿಯಲ್ಲಿ ಹರಿಯುವ ನೀರು ಒಮ್ಮೆ ಸಂಪರ್ಕ ಕಡಿದುಕೊಂಡರೆ ಮತ್ತೆ ಅದನ್ನು ಬಜೆ ಡ್ಯಾಂವರೆಗೆ ತರಲು ಕಷ್ಟವಾಗುತ್ತದೆ. ಅದಕ್ಕಾಗಿ ಹರಿವು ಕಡಿಮೆಯಾಗುತ್ತಿದ್ದಂತೆ ಎಪ್ರಿಲ್ ತಿಂಗಳಲ್ಲೇ ನೀರನ್ನು ಪಂಪಿಂಗ್ ಮಾಡಿ ಹಾಯಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ಸೂಕ್ತ ಸಮಯದಲ್ಲಿ ಕೆಲಸ ಆರಂಭಿಸುವುದರಿಂದ ನೀರಿನ ಸಮಸ್ಯೆ ಬಾರದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಹೀಗೆ ಮಾಡುವುದರಿಂದ ಮೇ ಅಂತ್ಯದವರೆಗೆ ಯಾವುದೇ ಅಡೆ ತಡೆ ಇಲ್ಲದೆ ಕೊಡಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಜೆ ಡ್ಯಾಂನಲ್ಲಿ ಸದ್ಯ 4.49ಮೀಟರ್ ನೀರಿನ ಸಂಗ್ರಹ ಇದ್ದು, ಇದರಲ್ಲಿ 3.30ಮೀಟರ್ ನೀರನ್ನು ಬಳಸಬಹುದಾಗಿದೆ. ಪ್ರತಿದಿನ 8-9 ಸೆ.ಮೀ. ನೀರನ್ನು ಬಳಸಿದರೂ 35-40 ದಿನಗಳಿಗೆ ಬೇಕಾಗುವಷ್ಟು ನೀರು ಇದೆ. ಇದೀಗ ಶಿರೂರು ಡ್ಯಾಂ ಬಳಿ ನೀರು ಪಂಪಿಂಗ್ ಮಾಡುವುದರಿಂದ ಮೇ ಅಂತ್ಯದ ವರೆಗೂ ನೀರು ಸಾಕಾಗಬಹುದು.

-ಮೋಹನ್‌ರಾಜ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ನಗರಸಭೆ ಉಡುಪಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News