ಹಂಚುಕಾರ್ಮಿಕರಿಗೆ ವೇತನ ಸಹಿತ ರಜೆಗೆ ನೀಡಲು ಆಗ್ರಹ
ಕುಂದಾಪುರ, ಎ.9: ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಲು ಸರಕಾರ ಆದೇಶ ಹೊರಡಿಸಿದ್ದು, ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ತಾಲೂಕುಗಳ ಹಂಚು ಕಾರ್ಖಾನೆಯ ಮಾಲಕರು ಕಾರ್ಮಿಕರಿಗೆ ಈವರೆಗೂ ವೇತನ ನೀಡದೆ ಆದೇಶ ಉಲ್ಲಂಘಿಸಿದೆ ಎಂದು ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ ದೂರಿದೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಸಂಘ, ಹಂಚು ಕಾರ್ಮಿಕರು ಅತೀ ಕಡಿಮೆ ವೇತನದಲ್ಲಿ ದುಡಿಯುವ ಕಾರ್ಮಿಕರಾಗಿದ್ದು ಬೇರೆ ಯಾವುದೇ ಆದಾಯಗಳಿಲ್ಲದೇ ತಮ್ಮ ಕುಟುಂಬ ಸಲುಹುತ್ತಿದ್ದಾರೆ. ಕೋವಿಡ್ 19 ಹಾವಳಿಯಿಂದಾಗಿ ಕೆಲಸ ಇಲ್ಲವಾಗಿದ್ದು, ಸಾವಿರಾರು ಕುಟುಂಬಗಳು ಅಗತ್ಯ ಆಹಾರ ಕೊಳ್ಳಲು ಸಂಕಷ್ಟ ಪಡುವಂತಾಗಿದೆ ಎಂದು ಆರೋಪಿಸಿದೆ.
ಇಂತಹ ಸಂದರ್ಭದಲ್ಲಿ ಮಾಲಕರಲ್ಲಿ ಸಂಘವು ವೇತನ ನೀಡಲು ಒತ್ತಾಯಿಸಿದರೂ ಸ್ಪಂದಿಸಿಲ್ಲ. ಸರಕಾರ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಧ್ಯ ಪ್ರವೇಶಿಸಿ ವೇತನ ನೀಡುವಂತೆ ಕ್ರಮವಹಿಸಿ ಬಡ ಹಂಚು ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ವಿ.ರಸಿಂಹ ಮನವಿಯಲ್ಲಿ ಆಗ್ರಹಿಸಿದ್ದಾರೆ.