ಲಾಕ್‌ಡೌನ್ ಹಿನ್ನಲೆ ಮನೆಯಲ್ಲಿಯೇ ಪವಿತ್ರ ಗುರುವಾರ ಆಚರಣೆ

Update: 2020-04-09 15:39 GMT

ಉಡುಪಿ, ಎ.9: ಯೇಸು ಕ್ರಿಸ್ತರು ತನ್ನ ಶಿಷ್ಯರ ಜತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೆಸ್ತ ಧರ್ಮಸಭೆಯ ಉಗಮದ ನೆನಪನ್ನು ಸಾರುವ ಪವಿತ್ರ ಗುರುವಾರವನ್ನು ಲಾಕ್‌ಡೌನ್ ಹಿನ್ನೆಲೆಯಲ್ಲಿ ಕ್ರೆಸ್ತರು ಉಡುಪಿ ಜಿಲ್ಲೆಯಾದ್ಯಂತ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಆಚರಿಸಿದರು.

ಕೋರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಹಿನ್ನಲೆಯಲ್ಲಿ ಧರ್ಮಗುರುಗಳು ತಮ್ಮ ಅಧೀನ ಚರ್ಚುಗಳಲ್ಲಿ ಭಕ್ತರ ಅನು ಪಸ್ಥಿತಿಯಲ್ಲಿ ಖಾಸಗಿಯಾಗಿ ಬಲಿಪೂಜೆ ನೆರವೇರಿಸಿದರು. ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ತಮ್ಮ ನಿವಾಸ ದಲ್ಲಿರುವ ಪ್ರಾರ್ಥನಾ ಮಂದಿರದಲ್ಲೇ ಖಾಸಗಿಯಾಗಿ ಪ್ರಾರ್ಥನೆ ಸಲ್ಲಿಸಿದರು.

 ಯೇಸು ಕ್ರಿಸ್ತರು ತನ್ನ ಶಿಷ್ಯರ ಜತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೆಸ್ತ ಧರ್ಮಸಭೆಯ ಉಗಮದ ನೆನಪನ್ನು ಸಾರುವ ಪ್ರಯುಕ್ತ ಧರ್ಮಗುರುಗಳು 12 ಮಂದಿ ಪ್ರೆಷಿತರ(ವಿಶ್ವಾಸಿಗಳು) ಪಾದಗಳನ್ನು ತೊಳೆಯುವ ವಿಧಿಯನ್ನು ಲಾಕ್‌ಡೌನ್ ಹಿನ್ನಲೆಯಲ್ಲಿ ನಿಷೇಧಿಸಲಾಗಿತ್ತು.

ಪವಿತ್ರ ಗುರುವಾರದಂದು ಯೇಸು ಸ್ವಾಮಿಯು ತನ್ನ 12 ಮಂದಿ ಶಿಷ್ಯ ರೊಂದಿಗೆ ಸೇರಿ ತನ್ನ ಕೊನೆಯ ಭೋಜನ ನಡೆಸಿದ್ದರು. ಈ ವೇಳೆ ತನ್ನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ತನ್ನ ಶಿಷ್ಯರಿಗೆ ದೀನತೆಯ ಹಾಗೂ ಸೇವೆಯ ಸಂದೇಶ ಸಾರಿದ್ದರು. ಈ ದಿನ ಚರ್ಚ್‌ಗಳಲ್ಲಿ ಪರಮ ಪ್ರಸಾದ ಸಂಸ್ಕಾರ, ಗುರು ದೀಕ್ಷೆಯ ಸಂಸ್ಕಾರ, ಸೇವೆಯ ಸಂಸ್ಕಾರದ ಸ್ಮರಣೆಯೊಂದಿಗೆ ವಿಶೇಷ ಪ್ರಾರ್ಥನೆ, ಬಲಿಪೂಜೆ, ಆರಾಧನೆಗಳು ನಡೆಯುತ್ತವೆ.

ಪವಿತ್ರ ಗುರುವಾರದ ಬಳಿಕ ಶುಕ್ರವಾರದಂದು ಯೇಸು ಸ್ವಾಮಿಯನ್ನು ಶಿಲುಬೆಗೇರಿಸಿದ್ದು ಶುಕ್ರವಾರವನ್ನು ಕ್ರೆಸ್ತರು ಶುಭ ಶುಕ್ರವಾರವಾಗಿ ಆಚರಿಸಿ ಧ್ಯಾನ, ಉಪವಾಸ ಹಾಗೂ ಯೇಸುವಿನ ಶಿಲುಬೆಯ ಹಾದಿಯನ್ನು ನೆರವೇರಿಸುವ ಮೂಲಕ ಆಚರಿಸುತ್ತಾರೆ. ಆದರೆ ಈ ಬಾರಿ ಲಾಕ್‌ಡೌನ್ ಹಿನ್ನಲೆಯಲ್ಲಿ ಮನೆಯಲ್ಲಿಯೇ ಆಚರಿಸುವಂತೆ ಧರ್ಮಾಧ್ಯಕ್ಷರು ಹಾಗೂ ಜಿಲ್ಲಾಡಳಿತ ವಿನಂತಿಸಿದ್ದು ಅದರಂತೆ ಕ್ರೈಸ್ತರು ಆದೇಶನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News