ಹೆಬ್ರಿ: ತಹಶೀಲ್ದಾರ್‌ರಿಂದ ಅಂಗಡಿಗಳ ತಪಾಸಣೆ, ಎಚ್ಚರಿಕೆ

Update: 2020-04-09 15:48 GMT

ಹೆಬ್ರಿ, ಎ.9: ಕೊರೋನ ಮಹಾಮಾರಿಯ ಹಿನ್ನಲೆಯಲ್ಲಿ ಸರಕಾರ ಲಾಕ್ ಡೌನ್ ಘೋಷಿಸಿದ್ದು, ಇದರಿಂದ ಜನಸಾಮಾನ್ಯರು ಕೆಲಸವಿಲ್ಲದೆ, ಕ್ಯೆಯಲ್ಲಿ ಕಾಸೂ ಇಲ್ಲದೆ ಕಂಗಾಲಾಗಿದ್ದರೆ, ಇನ್ನೊಂದು ಕಡೆ ಅಗತ್ಯ ವಸ್ತುಗಳ ಹೆಸರಿನಲ್ಲಿ ಅಂಗಡಿಯನ್ನು ಚಾಲು ಮಾಡುವ ಜಿನಸಿ ಅಂಗಡಿಗಳ ಮಾಲಕರು ಜನರನ್ನು ಸುಲಿಗೆ ಮಾಡುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಹೆಬ್ರಿ ತಹಶೀಲ್ದಾರ್ ಕೆ.ಮಹೇಶ್ಚಂದ್ರ ಹಲವು ಅಂಗಡಿಗೆ ತೆರಳಿ ತಪಾಸಣೆ ನಡೆಸಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಜನರಿಗೆ ಅತಿ ಅಗತ್ಯವಾದ ತರಕಾರಿ, ಹಣ್ಣು ಹಂಪಲು ಸಹಿತ ದಿನಬಳಕೆಯ ವಸ್ತುಗಳನ್ನು ಅತೀ ದುಬಾರಿ ಬೆಲೆ ಮಾರಾಟ ಮಾಡುತ್ತಿರುವ ಬಗ್ಗೆ ಹೆಬ್ರಿ ತಹಶೀಲ್ಧಾರ್‌ಗೆ ಸಾರ್ವಜನಿಕರಿಂದ ಬಂದ ಖಚಿತ ದೂರಿನ ಹಿನ್ನಲೆಯಲ್ಲಿ ಕಂದಾಯ ಅಧಿಕಾರಿಗಳ ತಂಡದೊಂದಿಗೆ ಮುನಿಯಾಲಿನ ಕೆಲಕಡೆ ಮತ್ತು ಮಡಾಮಕ್ಕಿಯ ಅಂಗಡಿಗಳಿಗೆ ದಿಡೀರ್ ಬೇಟ ನೀಡಿ ಪರಿಶೀಲಿಸಿ ಖಡಕ್ ವಾರ್ನಿಂಗ್ ನೀಡಿದ ಘಟನೆ ಗುರುವಾರ ನಡೆದಿದೆ.

ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕೆಜಿಗೆ 9-10ರೂ.ಗೆ ಸಿಗುವ ಟೊಮ್ಯಾಟೊವನ್ನು ಅಂಗಡಿಯವರು 45, 50, 60, 65ರೂ. ಹೀಗೆ ನಾನಾ ದರದಲ್ಲಿ ಮಾರಿ ಜನರನ್ನು ಕಳೆದ 15 ದಿನಗಳಿಂದ ಸುಲಿಗೆ ಮಾಡುತಿದ್ದರು. ಇದರಿಂದ ಬೇಸತ್ತ ಗ್ರಾಮೀಣ ಪ್ರದೇಶದ ಮನೆಮಂದಿ, ಜನಸಾಮಾನ್ಯರು, ಕೂಲಿಕಾರ್ಮಿಕರು ತಹಶೀಲ್ದಾರ್‌ಗೆ ದೂರು ನೀಡಿದ್ದರೆಂದು ತಿಳಿದುಬಂದಿದೆ.

ಖಡಕ್ ಎಚ್ಚರಿಕೆ: ಜನಸಾಮಾನ್ಯರು ಕೊರೋನ ಲಾಕ್‌ಡೌನ್‌ನಿಂದ ಆರ್ಥಿಕ ಮುಗ್ಗಟ್ಟಿನೊಂದಿಗೆ ಭಾರೀ ಸಮಸ್ಯೆ ಎದುರಿಸುತಿದ್ದಾರೆ. ಆದುದರಿಂದ ಯಾವುದೇ ದಿನಬಳಕೆಯ ದಿನಸಿ ಸಾಮಾನು, ತರಕಾರಿಯನ್ನು ದುಬಾರಿ ಬೆಲೆಗೆ ಮಾರಾಟ ಮಾಡಬಾರದು. ಕನಿಷ್ಠ ಬೆಲೆಗೆ ಮಾರಬೇಕು. ಮಾರುವ ಬೆಲೆಯನ್ನು ಗ್ರಾಹಕರಿಗೆ ಕಾಣುವಂತೆ ಅಂಗಡಿಯ ಎದುರು ದರ ಪಟ್ಟಿಯನ್ನು ಅಂಟಿಸಬೇಕು ಎಂದು ಹೆಬ್ರಿ ತಾಲೂಕು ವ್ಯಾಪ್ತಿಯ ಎಲ್ಲಾ ಅಂಗಡಿಗಳ ಮಾಲಕರಿಗೆ ಮಹೇಶ್ಚಂದ್ರ ಖಡಕ್ ಎಚ್ಚರಿಕೆ ನೀಡಿದರು. ಒಂದು ವೇಳೆ ದುಬಾರಿ ಬೆಲೆಗೆ ಮಾರಾಟ ಮಾಡಿ ಸಾರ್ವಜನಿಕರಿಂದ ದೂರು ಬಂದರೆ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಅಧಿಕಾರಿಗಳ ದಿಢೀರ್ ಭೇಟಿ: ತಾಲೂಕಿನ ಮಡಾಮಕ್ಕಿ ಮತ್ತಿತರ ಪ್ರದೇಶ ದಲ್ಲಿ ಅಂಗಡಿ ಮಾಲಕರು ತರಕಾರಿಗಳ ಸಹಿತ ದಿನಬಳಕೆಯ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಹೆಬ್ರಿ ತಹಶೀಲ್ಧಾರ್ ಕೆ. ಮಹೇಶ್ಚಂದ್ರ ಮತ್ತವರ ತಂಡ,ಅಂಗಡಿ ಮುಂಗಟ್ಟುಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮುನಿಯಾಲು ಚಟ್ಕಲ್‌ಪಾದೆಯ ದಿನಸಿ ಅಂಗಡಿಗೆ ಹೆಬ್ರಿ ಅಜೆಕಾರು ಕಂದಾಯ ನಿರೀಕ್ಷಕ ಮಂಜುನಾಥ ನಾಯಕ್, ಹೆಬ್ರಿ ತಹಶೀಲ್ಧಾರ್‌ರ ಸೂಚನೆ ಮೇರೆಗೆ ತೆರಳಿ ದುಬಾರಿ ಬೆಲೆಗೆ ಮಾರಾಟ ಮಾಡದಂತೆ ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡಿದರು.

ವರಂಗ ಗ್ರಾಮ ಲೆಕ್ಕಾಧಿಕಾರಿ ರಾಚಪ್ಪಜೀ ನೇತೃತ್ವದಲ್ಲಿ ಇನ್ನೊಂದು ತಂಡವೂ ಇದೇ ರೀತಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿಗಳನ್ನು ಸಂಗ್ರಹಿಸಿತು. ಅಲ್ಲದೇ ದಿನಬಳಕೆ ಸಾಮಾಗ್ರಿಗಳ ಮತ್ತು ತರಕಾರಿಗಳ ದರದ ಪಟ್ಟಿಯನ್ನು ಅಂಗಡಿಯ ಗೋಡೆಗೆ ಅಂಟಿಸುವಂತೆ ತಾಕೀತು ಮಾಡಿತು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News