ದ.ಕ.ಜಿಲ್ಲೆ : 13 ‘ಜ್ವರ ಚಿಕಿತ್ಸಾಲಯ’ ಕಾರ್ಯಾಚರಣೆ

Update: 2020-04-09 15:57 GMT

ಮಂಗಳೂರು, ಎ.9: ರಾಷ್ಟ್ರವ್ಯಾಪಿ ಪಸರಿಸುವ ಕೊರೋನ ವೈರಸ್ ನಿಯಂತ್ರಣ ಮತ್ತು ತಡೆಗಟ್ಟುವ ಸಲುವಾಗಿ ದ.ಕ.ಜಿಲ್ಲೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಜನ ಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಜ್ವರ ಕ್ಲಿನಿಕ್‌ಗಳನ್ನು ಪ್ರಮುಖ ಆರೋಗ್ಯ ಸಂಸ್ಥೆಗಳಲ್ಲಿ ತೆರೆದಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾ ವ್ಯಾಪ್ತಿಯಲ್ಲಿ 13 ಜ್ವರದ ಚಿಕಿತ್ಸಾಲಯಗಳನ್ನು ತೆರೆಯಲಾಗಿದ್ದು ಅವುಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬಹುದಾಗಿದೆ.

ಎಲ್ಲಾ ತಾಲೂಕು ಆಸ್ಪತ್ರೆಗಳು, ಜಿಲ್ಲೆಯ 8 ಮೆಡಿಕಲ್ ಕಾಲೇಜುಗಳಾದ ಕುಂಟಿಕಾನದ ಎ.ಜೆ. ವೈದ್ಯಕೀಯ ಕಾಲೇಜು, ಕಂಕನಾಡಿಯ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಅತ್ತಾವರ ಕಸ್ತೂರ್ಬಾ ವೈದ್ಯಕೀಯ ಕಾಲೇಜು, ದೇರಳಕಟ್ಟೆಯ ಯೆನೆಪೊಯ ವೈದ್ಯಕೀಯ ಕಾಲೇಜು, ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು, ಕಣಚೂರು ವೈದ್ಯಕೀಯ ಕಾಲೇಜು, ಮುಕ್ಕದ ಶ್ರೀನಿವಾಸ ವೈದ್ಯಕೀಯ ಕಾಲೇಜು, ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜು, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲೂ ತೆರೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಯ ಪ್ರಕಟನೆ ತಿಳಿಸಿದೆ.

ಕ್ವಾರೆಂಟೈನ್ ಮೇಲ್ವಿಚಾರಣೆ ಕೇಂದ್ರಗಳು: ಯಾವುದೇ ರೋಗ ಲಕ್ಷಣವಿಲ್ಲದಿದ್ದರೂ ಕೊರೋನ ಸಂಪರ್ಕ ಸಾಧ್ಯತೆ ಇರುವ ವರನ್ನು ನಿಗಾವಣೆಯಲ್ಲಿಡಲು ಮಂಗಳೂರಿನ ಇಎಸ್‌ಐ ಆಸ್ಪತ್ರೆ, ಇಂಡಿಯಾನ ಆಸ್ಪತ್ರೆ, ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ, ಸುರತ್ಕಲ್ ಎನ್‌ಐಟಿಕೆ ಹಾಸ್ಟೆಲ್‌ನಲ್ಲಿ ಕ್ವಾರೆಂಟೈನ್ ಮೇಲ್ವಿಚಾರಣಾ ಕೇಂದ್ರಗಳನ್ನು ತೆರೆಯಲಾಗಿದೆ.

ಪ್ರತ್ಯೇಕ ಮೇಲ್ವಿಚಾರಣೆ ಕೇಂದ್ರಗಳು : ಶಂಕಿತ ಕರೋನ ರೋಗಿಗಳನ್ನು ಪ್ರತ್ಯೇಕವಾಗಿಡಲು ಜಿಲ್ಲೆಯ 13 ಆಸ್ಪತ್ರೆಗಳಾದ ಕುಂಟಿಕಾನದ ಎಜೆ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆ, ಅತ್ತಾವರದ ಕೆಎಂಸಿ ಆಸ್ಪತ್ರೆ, ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆ ಮತ್ತು ಕೆ.ಎಸ್. ಹೆಗ್ಡೆ ಆಸ್ಪತ್ರೆ ಹಾಗೂ ಕಣಚೂರು ಆಸ್ಪತ್ರೆ, ಮುಕ್ಕದ ಶ್ರೀನಿವಾಸ್ ಮೆಡಿಕಲ್ಕಾಲೇಜು ಆಸ್ಪತ್ರೆ, ದೇರಳಕಟ್ಟೆಯ ಸುಳ್ಯದ ಕೆವಿಜಿ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆ, ಸುಳ್ಯ ಸಮುದಾಯ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾವಣೆ ಕೇಂದ್ರಗಳನ್ನು ತೆರೆಯಲಾಗಿದೆ.

ಕೊರೋನ ಸೋಂಕು ದೃಢಪಟ್ಟ ಮತ್ತು ತುರ್ತುಚಿಕಿತ್ಸೆ ಹಾಗೂ ಗಂಭೀರಾವಸ್ಥೆಯಲ್ಲಿರುವ ರೋಗಿಗಳಿಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅಧಿಸೂಚನೆ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News