ದ.ಕ.: ಕ್ರೈಸ್ತರಿಂದ ‘ಪವಿತ್ರ ಗುರುವಾರ’ ಆಚರಣೆ

Update: 2020-04-09 17:15 GMT

ಮಂಗಳೂರು, ಎ.9: ದ.ಕ.ಜಿಲ್ಲೆಯ ಕ್ರೈಸ್ತರು ಏಸು ಕ್ರಿಸ್ತರ ಕೊನೆಯ ಭೋಜನದ ದಿನ (ಪವಿತ್ರ ಗುರುವಾರ)ವನ್ನು ಆಚರಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅನಿವಾರ್ಯತೆಯ ಕಾರಣಕ್ಕಾಗಿ ಚರ್ಚ್‌ಗಳಲ್ಲಿ ಬಲಿಪೂಜೆ ಇರಲಿಲ್ಲ.

ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೈ.ರೆ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಸಂಜೆ 5 ಗಂಟೆಗೆ ರೊಜಾರಿಯೋ ಕೆಥೆಡ್ರಲ್‌ನಲ್ಲಿ ನಡೆಸಿದ ಬಲಿ ಪೂಜೆಯನ್ನು ಯೂಟ್ಯೂಬ್ ಹಾಗೂ ಖಾಸಗಿ ವಾಹಿನಿಯಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಅದನ್ನು ಕ್ರೈಸ್ತರು ತಮ್ಮ ಮನೆಗಳಲ್ಲಿಯೇ ವೀಕ್ಷಿಸಿ ಪ್ರಾರ್ಥನೆಯಲ್ಲಿ ಸಹಭಾಗಿಗಳಾದರು. ಕೆಥೆಡ್ರಲ್‌ನ ರೆಕ್ಟರ್ ಫಾ. ಜೆ. ಬಿ. ಕ್ರಾಸ್ತಾ ಮತ್ತು ಸಹಾಯಕ ಗುರು ಫಾ. ಫ್ಲೇವಿಯನ್ ಲೋಬೊ ಬಲಿಪೂಜೆಯಲ್ಲಿ ಉಪಸ್ಥಿತರಿದ್ದರು.

ಏಸು ಕ್ರಿಸ್ತರು ಶಿಲುಬೆಯಲ್ಲಿ ಸಾವನ್ನಪ್ಪುವ ಮುಂಚಿನ ದಿನ ರಾತ್ರಿ ತನ್ನ ಶಿಷ್ಯರ ಜತೆ ಕೊನೆಯ ಭೋಜನವನ್ನು ಸೇವಿಸಿದ್ದು, ಈ ದಿನವನ್ನು ಕ್ರೈಸ್ತ ಸಭೆ ಪವಿತ್ರ ಗುರುವಾರವನ್ನಾಗಿ ಆಚರಿಸುತ್ತಿದೆ. ಕೊನೆಯ ಭೋಜನದ ಸಂದರ್ಭ ಏಸು ಕ್ರಿಸ್ತರು ಯಾಜಕರ (ಧರ್ಮಗುರುಗಳ) ಸಂಸ್ಕಾರ ಮತ್ತು ಪರಮ ಪ್ರಸಾದದ ಸಂಸ್ಕಾರವನ್ನು ಸ್ಥಾಪಿಸಿದರು ಹಾಗೂ ತನ್ನ 12 ಮಂದಿ ಶಿಷ್ಯಂದಿರ ಪಾದಗಳನ್ನು ತೊಳೆಯುವ ಮೂಲಕ ಸೇವೆಯ ಉಪದೇಶವನ್ನು ನೀಡಿದ್ದರು. ಈ ಮೂರೂ ಸಂಭ್ರಮಗಳನ್ನು ಕ್ರೈಸ್ತ ಸಭೆ ಸಂಯುಕ್ತವಾಗಿ ಆಚರಿಸಿಕೊಂಡು ಬರುತ್ತಿದೆ. ಏಸುಕ್ರಿಸ್ತರು ತನ್ನ ಶಿಷ್ಯರ ಪಾದಗಳನ್ನು ತೊಳೆದುದರ ಸ್ಮರಣಾರ್ಥ ಬಿಷಪ್ ಅಥವಾ ಧರ್ಮಗುರುಗಳು 12 ಮಂದಿ ಕ್ರೈಸ್ತ ವಿಶ್ವಾಸಿಗಳ ಪಾದಗಳನ್ನು ತೊಳೆಯುತ್ತಿರುವುದು ಸಂಪ್ರದಾಯವಾಗಿ ಬಂದಿದೆ. ಆದರೆ ಈ ವರ್ಷ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬರ ಬೇಕಾಗಿರುವುದರಿಂದ ಪಾದಗಳನ್ನು ತೊಳೆಯುವ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿತ್ತು.

ಬಲಿ ಪೂಜೆಯ ವೇಳೆ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ಕೊರೋನ ಕಾಯಿಲೆಯಿಂದ ಬಳಲುತ್ತಿರುವವರು ಶೀಘ್ರ ಗುಣಮುಖರಾಗಲಿ ಹಾಗೂ ಈ ರೋಗ ಆದಷ್ಟು ಬೇಗನೆ ನಿರ್ಮೂಲನವಾಗಲಿ, ರೋಗಿಗಳಿಗೆ ಸೇವೆ ಒದಗಿಸುತ್ತಿರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ವರ್ಗಕ್ಕೆ ದೇವರು ಉತ್ತಮ ಆರೋಗ್ಯವನ್ನು ಹಾಗೂ ಇನ್ನಷ್ಟು ಶಕ್ತಿಯನ್ನು ದಯಪಾಲಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಯಿತು. ಅಲ್ಲದೆ ಕೊರೋನ ಸೋಂಕಿನಿಂದ ಮೃತಪಟ್ಟವರಿಗೆ ಚಿರಶಾಂತಿಯನ್ನು ಕೋರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News