​ಸುಳ್ಳು ಸುದ್ದಿಗಳನ್ನು ನಂಬಬೇಡಿ, ಇಂದು ಜುಮಾ ಬದಲು ಮನೆಗಳಲ್ಲೇ ಲುಹರ್ ನಮಾಝ್ ನಿರ್ವಹಿಸಿ: ಖಾಝಿ

Update: 2020-04-10 05:09 GMT

ಮಂಗಳೂರು, ಎ.10: ಸುದ್ದಿವಾಹಿನಿಯಲ್ಲಿ ಈ ಹಿಂದೆ ಪ್ರಸಾರಗೊಂಡ ಮಂಗಳೂರು ನಗರ ಪೊಲೀಸ್ ಆಯುಕ್ತರ ಹಳೆಯ ಹೇಳಿಕೆ ‘ಇಂದು ನಗರದಲ್ಲಿ ಕರ್ಫ್ಯೂ ಇಲ್ಲ’ ಎಂಬುದನ್ನು ಇಂದಿನ(ಎಪ್ರಿಲ್ 10) ಹೇಳಿಕೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಹರಡಲಾಗುತ್ತಿದೆ. ಇದು ಹಳೆಯ ಸುದ್ದಿಯಾಗಿದ್ದು, ಇದನ್ನು ಯಾರೂ ಪರಿಗಣಿಸಬಾರದು. ಇಂದು (ಎ.10) ಜುಮಾ ನಮಾಝ್ ಬದಲು ಈ ಹಿಂದಿನ ಎರಡು ಶುಕ್ರವಾರಗಳಂತೆ ಮನೆಯಲ್ಲೇ ಲುಹರ್ ನಮಾಝ್ ನಿರ್ವಹಿಸಿ ಸಹಕರಿಸಬೇಕು ಎಂದು ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.

ಈ ಹಿಂದೆ ಟಿವಿವಾಹಿನಿಯಲ್ಲಿ ಬಿತ್ತರಗೊಂಡಿದ್ದ ನಗರ ಪೊಲೀಸ್ ಆಯುಕ್ತರು ‘ಮಂಗಳೂರಿನಲ್ಲಿಂದು ಕರ್ಫ್ಯೂ ಇಲ್ಲ’ ಎಂದು ನೀಡಿದ್ದ ಹೇಳಿಕೆಯ ವೀಡಿಯೊ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಖಾಝಿ ಈ ಸ್ಪಷ್ಟೀಕರಣ ನೀಡಿದ್ದಾರೆ.

ಲಾಕ್‌ಡೌನ್ ಹಿಂಪಡೆದಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಯಾವುದೇ ಹೇಳಿಕೆ ನೀಡಿಲ್ಲ. ಆದ್ದರಿಂದ ಈ ಹಿಂದಿನ ಎರಡು ಶುಕ್ರವಾರಗಳಲ್ಲಿ ನಿರ್ವಹಿಸಿದಂತೆ ಮನೆಗಳಲ್ಲೇ ನಮಾಝ್ ನಿರ್ವಹಿಸಬೇಕು. ಸದ್ಯ ಪರಿಸ್ಥಿತಿ ತಿಳಿಗೊಳ್ಳುವವರೆಗೆ ಜನತೆ ಸಹಕರಿಸಬೇಕು. ಹಾಗಾದಲ್ಲಿ ಮಾತ್ರ ಈ ಸಂಕಷ್ಟದಿಂದ ನಾವು ಪಾರಾಗಲು ಸಾಧ್ಯ. ಮುಂದಿನ ಸೂಚನೆಯವರೆಗೆ ಜುಮಾ ನಮಾಝ್‌ಗಳಿಗೆ ಮಸೀದಿಗಳಿಗೆ ತೆರಳದೆ ಸಹಕರಿಸಬೇಕು ಎಂದು ಖಾಝಿ ಹೇಳಿಕೆಯೊಂದರ ಮೂಲಕ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News