ಪಡುಕೋಣೆ: ಆದೇಶ ಉಲ್ಲಂಘಿಸಿ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ; ಧರ್ಮಗುರು ಸಹಿತ 6 ಮಂದಿ ವಿರುದ್ಧ ಎಫ್‌ಐಆರ್

Update: 2020-04-10 07:07 GMT
ಸಾಂದರ್ಭಿಕ ಚಿತ್ರ

ಗಂಗೊಳ್ಳಿ, ಎ.10: ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ನಾಡ ಗ್ರಾಮ ಪಡುಕೋಣೆಯ ಸಂತ ಅಂತೋನಿ ಚರ್ಚ್‌ನಲ್ಲಿ ಗುರುವಾರ ಸಂಜೆ 6:30ರ ವೇಳೆಗೆ ಸಾಮೂಹಿಕ ಪ್ರಾರ್ಥನೆ ಮಾಡಿದ ಆರೋಪದಲ್ಲಿ ಚರ್ಚ್ ಧರ್ಮಗುರು ಸೇರಿದಂತೆ ಆರು ಮಂದಿಯ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯತ್ತಿರುವ ಕುರಿತು ಬಂದಿರುವ ಸಾರ್ವಜನಿಕ ದೂರವಾಣಿ ಕರೆಯ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಗಂಗೊಳ್ಳಿ ಪೊಲೀಸರು ಚರ್ಚ್‌ನ ಧರ್ಮಗುರು ವಂ.ಫ್ರೆಡ್ ಮಸ್ಕರೇನಸ್ ಹಾಗೂ ಆರು ಮಂದಿಯ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ನಾಡ ಗ್ರಾಮದ ಪಡುಕೋಣೆಯಲ್ಲಿರುವ ಈ ಚರ್ಚ್‌ನಲ್ಲಿ ವಂ.ಫ್ರೆಡ್ ಮಸ್ಕರೇನಸ್ ಹಾಗೂ ಆರು ಮಂದಿ ನಿನ್ನೆ ರಾತ್ರಿ ಗುಡ್‌ಫ್ರೈಡೇ ನಿಮಿತ್ತ ಪ್ರಾರ್ಥನೆಗೆ ಸೇರಿದ್ದರು. ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶದ ಹೊರತಾಗಿಯೂ ಇವರು ಸಾಮಾಜಿಕ ಅಂತರವನ್ನು ಉಲ್ಲಂಘಿಸಿ ಚರ್ಚ್‌ನಲ್ಲಿ ಸೇರಿದ್ದರೆನ್ನಲಾಗಿದೆ.

ಜಿಲ್ಲಾಧಿಕಾರಿಯ ಆದೇಶವನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಇವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಜಿಲ್ಲೆಯ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸದಂತೆ ಬಿಷಪ್ ಕೂಡಾ ಸೂಚನೆ ನೀಡಿದ್ದರು. ಗಂಗೊಳ್ಳಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News