ಕೊರೋನ ವಿರುದ್ಧ ಹೋರಾಟ: ಕಾಸರಗೋಡಿನಲ್ಲಿ ಟಾಟಾ ಸಮೂಹದಿಂದ ಸ್ಪೆಷಾಲಿಟಿ ಆಸ್ಪತ್ರೆ

Update: 2020-04-10 07:20 GMT
ಸಾಂದರ್ಭಿಕ ಚಿತ್ರ

ಕಾಸರಗೋಡು: ಟಾಟಾ ಸಮೂಹ ಸಂಸ್ಥೆ ಕಾಸರಗೋಡು ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳೊಳಗೆ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದೆ. ಈ ವಿಚಾರವನ್ನು ಜಿಲ್ಲಾ ಕಲೆಕ್ಟರ್ ಡಿ ಸಜಿತ್ ಬಾಬು ತಮ್ಮ ಫೇಸ್ ಬುಕ್ ಪುಟದಲ್ಲಿ ತಿಳಿಸಿದ್ದಾರೆ.

ಪ್ರಿ-ಫ್ಯಾಬ್ರಿಕೇಶನ್ ತಂತ್ರಜ್ಞಾನ  ಬಳಸಿ ಈ ಆಸ್ಪತ್ರೆ ನಿರ್ಮಿಸಲಾಗುವುದೆಂಬ ಮಾಹಿತಿಯಿದೆ. ಆಸ್ಪತ್ರೆಯಲ್ಲಿ 540 ಐಸೊಲೇಶನ್ ಹಾಸಿಗೆಗಳಿರಲಿದ್ದು  450 ಮಂದಿಗೆ ಕ್ವಾರಂಟೈನ್ ಸೌಲಭ್ಯವೂ ಇಲ್ಲಿರಲಿದೆ. ಟಾಟಾ ಸಮೂಹ ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದನ್ವಯ ಈ ಆಸ್ಪತ್ರೆ ನಿರ್ಮಿಸಲಿದೆ.

ಈ ಆಸ್ಪತ್ರೆಗಾಗಿ ಚೆಮ್ನಾಡ್ ಪಂಚಾಯತ್ ವ್ಯಾಪ್ತಿಯ ತೆಕ್ಕಿಲ್ ಗ್ರಾಮದಲ್ಲಿ 15 ಎಕರೆ ಜಾಗ ಗುರುತಿಸಲಾಗಿದೆ. ಈ ಆಸ್ಪತ್ರೆಯು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ  ಕಂದಾಯ ಸಚಿವ ಇ ಚಂದ್ರಶೇಖರನ್ ಅವರ ಕೊಡುಗೆ ಎಂದು ಸಜಿತ್ ಬಾಬು ಬಣ್ಣಿಸಿದ್ದಾರೆ.

ಕೇರಳದಲ್ಲಿಯೇ ಅತ್ಯಧಿಕ ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಕಾಸರಗೋಡು ಜಿಲ್ಲೆಯ ಜನರು ತಮ್ಮ ಹಲವು ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ನೆರೆಯ ಮಂಗಳೂರನ್ನೇ ಅವಲಂಬಿಸಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಕಾಸರಗೋಡಿನಲ್ಲಿ ಕೊರೋನ ಪ್ರಕರಣಗಳು ಅಧಿಕವಾಗುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿಯನ್ನು ಮುಚ್ಚಿತ್ತು. ಇದು ಕೊನೆಗೆ ಸುಪ್ರೀಂ ಕೋರ್ಟ್‍ವರೆಗೂ ಹೋಗಿ ಈಗ ಕೋವಿಡ್-19 ರೋಗಿಗಳನ್ನು ಹೊರತುಪಡಿಸಿ ತುರ್ತು ಚಿಕಿತ್ಸೆ ಅಗತ್ಯವಿರುವ ಇತರ ರೋಗಿಗಳನ್ನು ಅನುಮತಿಸಲಾಗುತ್ತಿದೆ.

ಇದೀಗ ಟಾಟಾ ಸಮೂಹ ಈ ಆಸ್ಪತ್ರೆ ನಿರ್ಮಿಸಲು ಮುಂದೆ ಬಂದಿರುವುದು ಕಾಸರಗೋಡು ಜನರಿಗೆ ಹೊಸ ಆಶಾಕಿರಣ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News