ಭಟ್ಕಳದ ಕೊರೋನ ಸೋಂಕಿತ ಗರ್ಭಿಣಿಗೆ ಉಡುಪಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Update: 2020-04-10 07:37 GMT

ಉಡುಪಿ, ಎ.10: ಭಟ್ಕಳದ ಕೊರೋನ ವೈರಸ್ ಸೋಂಕಿತೆ 26 ವರ್ಷ ಪ್ರಾಯದ ಗರ್ಭಿಣಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರ ರಾತ್ರಿ ಉಡುಪಿಯ ಕೋವಿಡ್ ಆಸ್ಪತ್ರೆಯಾಗಿ ನಿಯುಕ್ತಿಗೊಂಡಿರುವ ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದುಬೈಯಿಂದ ಮರಳಿದವರ ಸಂಪರ್ಕದಲ್ಲಿದ್ದ ಈ ಮಹಿಳೆ ಭಟ್ಕಳದ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಎ.7ರಂದು ಇವರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿತ್ತು. ಈ ಮಹಿಳೆಯಲ್ಲಿ ತೀವ್ರತರದ ಉಸಿರಾಟದ ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಹೆಚ್ಚಿನ ಚಿಕಿತ್ಸೆ ಲಭ್ಯವಿರುವ ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿಯೇ ಇರುವ ಈ ಆಸ್ಪತ್ರೆಯಲ್ಲಿ 80 ಐಸೋಲೇಟೆಡ್ ಹಾಸಿಗೆ ಹಾಗೂ 20 ಐಸೋಲೇಟೆಡ್ ಐಸಿಯು ಹಾಸಿಗೆಗಳು ಲಭ್ಯವಿದೆ. ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಬಂದಿರುವ ಮೂವರು ಯುವಕರು ಈಗಾಗಲೇ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುತ್ತಿದ್ದಾರೆ.

ಇವರಲ್ಲಿ ಮೊದಲು ಸೋಂಕು ಪತ್ತೆಯಾದ ಮಣಿಪಾಲದ 34ರ ಹರೆಯದ ಯುವಕನ ಎರಡನೇ ಸ್ಯಾಂಪಲ್ ವರದಿ ಇಂದು ಬರುವ ನಿರೀಕ್ಷೆ ಇದ್ದು, ಅದೂ ನೆಗೆಟಿವ್ ಫಲಿತಾಂಶ ನೀಡಿದರೆ, ನಾಳೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಗೊಳ್ಳಬಹುದಾಗಿದೆ. ಮಾ.29ರಂದು ಸೋಂಕು ಪತ್ತೆಯಾದ ಉಡುಪಿ ಆಸುಪಾಸಿನ ಮತ್ತಿಬ್ಬರು ಯುವಕರ ಮೊದಲ ಸ್ಯಾಂಪಲ್ ಇಂದು ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News