*ಕೊರೋನ ವೈರಸ್ ಹಿನ್ನೆಲೆ: ಜುಮಾ ಇಲ್ಲದ 3ನೇ ‘ಶುಕ್ರವಾರ’

Update: 2020-04-10 08:26 GMT

ಮಂಗಳೂರು, ಎ.10: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ವಿಧಿಸಲಾದ ಲಾಕ್‌ಡೌನ್‌ಗೆ ಪೂರಕವಾಗಿ ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಝ್ ನಿರ್ವಹಿಸದಂತೆ ರಾಜ್ಯ ಸರಕಾರ, ಜಿಲ್ಲಾಡಳಿತ ಮನವಿಗೆ ಸ್ಪಂದಿಸಿ ಖಾಝಿಯ ನಿರ್ದೇಶನದಂತೆ ಎ.10ರ ‘ಶುಕ್ರವಾರ’ ಮಧ್ಯಾಹ್ನವೂ ಜುಮಾ ನಮಾಝ್ ನಿರ್ವಹಿಸಲಾಗದೆ ಮುಸ್ಲಿಮರು ತಮ್ಮ ಮನೆಗಳಲ್ಲೇ ಲುಹರ್ ನಮಾಝ್ ನಿರ್ವಹಿಸಿದರು.

ಮಾ.27 ಮತ್ತು ಎ.3ರ ‘ಶುಕ್ರವಾರ’ವನ್ನು ಜುಮಾ ನಮಾಝ್ ಇಲ್ಲದೆ ಅತ್ಯಂತ ನೋವಿನಿಂದ ಕಳೆದಿದ್ದ ಮುಸ್ಲಿಮರು ಎ.10ರ ಮೂರನೇ ಶುಕ್ರವಾರ ಕೂಡ ಜುಮಾ ನಮಾಝ್ ನಿರ್ವಹಿಸದೆ ಸರಕಾರದ ನಿಯಮಾವಳಿಯನ್ನು ಪಾಲಿಸಿದರು. 
ದ.ಕ. ಜಿಲ್ಲೆಯ ಯಾವುದೇ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಝ್ ಇರಲಿಲ್ಲ. ಮಸೀದಿಗಳ ಇಮಾಮ್ ಮತ್ತು ಮುಅದ್ಸಿನ್ ಸಹಿತ ಸಿಬ್ಬಂದಿ ವರ್ಗವು ಮಸೀದಿಯಲ್ಲಿ ಮತ್ತು ಸಮುದಾಯದ ಇತರರು ಮನೆಯಲ್ಲಿ ಲುಹರ್ ನಮಾಝ್ ನಿರ್ವಹಿಸಿ ಸಮಾಜದ ಸರ್ವರ ಹಿತ ಕಾಪಾಡುವುದರೊಂದಿಗೆ ಕಾನೂನಿಗೆ ಗೌರವ ನೀಡಿ ಗಮನ ಸೆಳೆದರು.

ಈಗಾಗಲೆ ನಗರದ ಮಸೀದಿಗಳಲ್ಲಿ ಸಾಮೂಹಿಕ ನಮಾಝ್‌ಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಶುಕ್ರವಾರವೂ ನಗರ ಮತ್ತು ಗ್ರಾಮೀಣ ಎಂಬ ವ್ಯತ್ಯಾಸವಿಲ್ಲದೆ ಸಾಮೂಹಿಕ ನಮಾಝ್‌ಗೆ ಹೇರಲಾದ ನಿರ್ಬಂಧವನ್ನು ಪಾಲಿಸಿದರು.

ಮಾ.13ರ ಶುಕ್ರವಾರದ ಜುಮಾ ನಮಾಝ್‌ನಲ್ಲಿ ನಾಝಿಲತ್ ಕುನೂತ್ ಪಠಿಸಲಾಗಿದ್ದರೆ, ಮಾ.20ರ ಶುಕ್ರವಾರದ ಜುಮಾ ನಮಾಝ್-ಪ್ರಾರ್ಥನೆಯನ್ನು ಚುಟುಕುಗೊಳಿಸಲಾಗಿತ್ತು. ಮಾ.27 ಮತ್ತು ಎ.3 ಹಾಗೂ ಎ.10ರ ಶುಕ್ರವಾರವೂ ಕೂಡ ಖಾಝಿಗಳ ನಿರ್ದೇಶನದಂತೆ ಜುಮಾ ನಮಾಝ್ ನಿರ್ವಹಿಸದೆ  ಕಾನೂನನ್ನು ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News