ಹಸಿದವರಿಗೆ ಮನೆಯೂಟ ಬಡಿಸುವ ಆಲಂಪಾಡಿಯ ಸಲೀಂ

Update: 2020-04-10 17:48 GMT

ಬಂಟ್ವಾಳ, ಎ.10: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು, ಭಿಕ್ಷುಕರು ಹಾಗೂ ನಿರ್ಗತಿಕರಿಗೆ ಮನೆಯಲ್ಲಿ ಊಟ ತಯಾರಿಸಿ ವಿತರಿಸುತ್ತಿರುವ ಸಲೀಂ ಎಂಬ ಯುವಕನ ಕಾರ್ಯ ಅಧಿಕಾರಿ ವರ್ಗದಿಂದಲೇ ಬೇಷ್ ಎಂದೆನಿಸಿಕೊಂಡಿದೆ.

ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಆಲಂಪಾಡಿ ನಿವಾಸಿ, ಎಸ್ ಡಿ ಪಿ ಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿಯಾದ ಸಲೀಂ, ಲಾಕ್‌ಡೌನ್‌ನಿಂದಾಗಿ ತಿನ್ನಲು ಅನ್ನವಿಲ್ಲದೆ ಹಸಿವಿನಿಂದ ಮಲಗುತ್ತಿದ್ದ ಕಾರ್ಮಿಕರು, ಭಿಕ್ಷುಕರನ್ನು ಗಮನಿಸಿ ಅವರಿಗೆ ತನ್ನ ಮನೆಯಲ್ಲಿ ಆಹಾರ ತಯಾರಿಸಿ ವಿತರಿಸುತ್ತಿದ್ದಾರೆ. ಸದ್ಯ ಬಿ.ಸಿ.ರೋಡ್, ಕೈಕಂಬ, ಬಿ.ಸಿ.ರೋಡ್ ರೈಲು ನಿಲ್ದಾಣ, ಪಾಣೆಮಂಗಳೂರು ಸಹಿತ ಹಲವು ಕಡೆಗಳಲ್ಲಿ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೇ ರೀತಿ ಭಿಕ್ಷುಕರು, ನಿರ್ಗತಿಕರು ಬಸ್ಸು ನಿಲ್ದಾಣಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇವರಿಗೆ ಬೆಳಗ್ಗೆ ಉಪಹಾರ ಮತ್ತು ಮಧ್ನಾಹ್ನದ ಊಟವನ್ನು ಬಂಟ್ವಾಳ ಪುರಸಭೆಯಿಂದ ವಿತರಿಸಲಾಗುತ್ತಿದೆ. ಆದರೆ ರಾತ್ರಿ ಅವರಿಗೆ ಆಹಾರ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡ ಸಲೀಂ ಅವರಿಗೆ ಸಂಜೆ ಚಹಾ, ತಿಂಡಿ ಮತ್ತು ರಾತ್ರಿ ಊಟ ಒದಗಿಸುತ್ತಿದ್ದಾರೆ.

ರಾತ್ರಿ ಊಟ ವಿತರಿಸುವ ವೇಳೆ ನಮಗೆ ಚಹಾ ಬೇಕು ಎಂದು ಕೆಲವರು ಬೇಡಿಕೊಂಡರು. ಅದರಂತೆ ಸಂಜೆ ಚಹಾ ಮತ್ತು ತಿಂಡಿ ವಿತರಿಸುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ಕಾರ್ಮಿಕರೇ ಇರುವುದರಿಂದ ಅವರಿಗೆ ಬೆಳ್ತಿಗೆ ಅಕ್ಕಿಯ ಊಟ, ಸಂಬಾರು, ಉಪ್ಪಿನಕಾಯಿ, ತರಕಾರಿ ಪಲ್ಯವನ್ನು ಸಲೀಂ ಆಲಂಪಾಡಿ ವಿತರಿಸುತ್ತಿದ್ದಾರೆ’’ ಎಂದು ಸಜಿಪ ಮುನ್ನೂರಿನ ಮಲಿಕ್ ಕೊಳಕೆ ಎಂಬವರು ತಿಳಿಸಿದ್ದಾರೆ.

ಸಲೀಂ ಕಟ್ಟಡ ನಿರ್ಮಾಣದಲ್ಲಿ ಸೂಪರ್‌ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಅವರು ವಿವಿಧ ರೀತಿಯಲ್ಲಿ ಸೇವೆ ಮಾಡುತ್ತಿದ್ದಾರೆ. ದಿನನಿತ್ಯ ಅವರಿಗೆ 20ರಿಂದ 30 ಮಂದಿ ಔಷಧಿಯ ಚೀಟಿಗಳನ್ನು ನೀಡುತ್ತಿದ್ದಾರೆ. ಚೀಟಿದಾರರಿಗೆ ಔಷಧಿಯನ್ನು ತಂದು ಕೊಡುತ್ತಿದ್ದಾರೆ. ತುರ್ತು ವೈದ್ಯಕೀಯ ಸೇವೆಗಾಗಿ ಹತ್ತಾರು ಮಂದಿಯನ್ನು ಮಂಗಳೂರು ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡುತ್ತಿದ್ದಾರೆ. ಇವರ ಸೇವೆಯನ್ನು ಕಂಡು ಇವರಿಗೆ ಎಪ್ರಿಲ್ 14ರವರೆಗೆ ಅವಧಿ ಇರುವ ಪಾಸನ್ನು ಅಧಿಕಾರಿಗಳು ನೀಡಿದ್ದಾರೆ’’ ಎಂದು ಮಲಿಕ್ ಹೇಳಿದ್ದಾರೆ.


ಶಬೇ ಬರಾಅತ್ ರಾತ್ರಿ ಬಿರಿಯಾನಿ, ಸಿಹಿ ತಿಂಡಿ

ಬುಧವಾರ ರಾತ್ರಿ ಮುಸ್ಲಿಮರು ಶಬೇ ಬರಾಅತ್ ರಾತ್ರಿ ಆಚರಿಸಿದ್ದರು. ಆ ರಾತ್ರಿಯಲ್ಲಿ ಮುಸ್ಲಿಮರು ತಮ್ಮ ಮನೆಯಲ್ಲಿ ಸಿಹಿತಿಂಡಿ ಹಾಗೂ ವಿಶೇಷ ಆಹಾರ ತಯಾರಿಸುತ್ತಾರೆ. ಅಂದು ರಾತ್ರಿ ಸಲೀಂ ಮನೆಯಲ್ಲಿ ಬಿರಿಯಾನಿ ಹಾಗೂ ಸಿಹಿ ತಿಂಡಿ ತಯಾರಿಸಿ ಕಾರ್ಮಿಕರು ಮತ್ತು ಭಿಕ್ಷುಕರಿಗೆ ವಿತರಿಸಿದ್ದಾರೆ. ಮಧ್ಯಾಹ್ನದ ಊಟ ತೆಗೆದುಕೊಂಡು ಹೋದಾಗಲೆಲ್ಲಾ ರಾತ್ರಿ ಊಟ ಕೊಡುವ ಸಲೀಂ ಅವರ ಸೇವೆಗೆ ಕಾರ್ಮಿಕರು, ನಿರ್ವಸಿತರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಊಟ, ಚಹಾ, ತಿಂಡಿ ಮಾತ್ರವಲ್ಲದೆ ಅಗತ್ಯವಿರುವ ಔಷಧಗಳನ್ನು ಕೂಡಾ ತಂದು ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಮೊನ್ನೆ ಬರಾಅತ್ ರಾತ್ರಿ ಬಿರಿಯಾನಿ, ಸಿಹಿ ತಿಂಡಿಗಳನ್ನು ವಿತರಿಸಿದ್ದು ಅವರಿಗೆ ತುಂಬಾ ಖುಷಿ ನೀಡಿದೆ. ಸಲೀಂ ಅವರ ಸೇವೆ ದಿ ಗ್ರೇಟ್.

- ಇಕ್ಬಾಲ್, ಕಿರಿಯ ಅಭಿಯಂತರ ಸಹಾಯಕ


ಪುರಸಭೆಯಿಂದ ಬಂಟ್ವಾಳ ವೆಂಕಟರಮಣ ದೇವಸ್ಥಾನದಲ್ಲಿ ಊಟ ತಯಾರಿಸಿ ಪುರಸಭಾ ವ್ಯಾಪ್ತಿಯಲ್ಲಿರುವ ಕಾರ್ಮಿಕರು, ಭಿಕ್ಷುಕರಿಗೆ ಮಧ್ಯಾಹ್ನ ವಿತರಿಸಲಾಗುತ್ತಿದೆ. ಲಾಕ್‌ಡೌನ್ ಆರಂದಲ್ಲಿ ಪುರಸಭೆಯ ಕಿರಿಯ ಅಭಿಯಂತರ ಸಹಾಯಕ ಇಕ್ಬಾಲ್ ರಾತ್ರಿ ಊಟ ವಿತರಿಸುತ್ತಿದ್ದರು. ಆ ಬಳಿಕ ಅವರಿಗೆ ಕೆಲಸದ ಒತ್ತಡದಿಂದ ಊಟ ವಿತರಣೆ ಅಸಾಧ್ಯವಾಯಿತು. ಕಾರ್ಮಿಕರು, ಭಿಕ್ಷುಕರು ಹಸಿವಿನಿಂದ ರಾತ್ರಿ ನಿದ್ದೆ ಮಾಡುವುದನ್ನು ಗಮನಿಸಿದ ಆಲಂಪಾಡಿಯ ಸಲೀಂ ಎಂಬ ಯುವಕ ಸಂಜೆ ಚಹಾ ತಿಂಡಿ, ರಾತ್ರಿ ಊಟ ವಿತರಿಸುತ್ತಿದ್ದಾರೆ. ಈ ಸಮಯದಲ್ಲಿ ಅವರ ಸೇವೆ ನಿಜಕ್ಕೂ ಶಾಘ್ಲನೀಯವಾದುದು.

- ಲೀನಾ ಬ್ರಿಟ್ಟೊ, ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News