ಲಾಕ್‌ಡೌನ್ ಉಲ್ಲಂಘನೆ: ಮಂಜೇಶ್ವರದಿಂದ ಅಡ್ಡೂರಿಗೆ ಬಂದ ಕುಟುಂಬ ಪೊಲೀಸ್ ವಶಕ್ಕೆ

Update: 2020-04-10 14:53 GMT

​ಮಂಗಳೂರು, ಎ.10: ಲಾಕ್‌ಡೌನ್ ಉಲ್ಲಂಘಿಸಿ ನದಿಯ ಮೂಲಕ ಅಕ್ರಮವಾಗಿ ಮಂಜೇಶ್ವರದಿಂದ ಮಂಗಳೂರಿಗೆ ಪ್ರವೇಶಿಸಿದ ಕುಟುಂಬವೊಂದರ 7 ಮಂದಿಯನ್ನು ಬಜ್ಪೆ ಪೊಲೀಸರು ಗುರುವಾರ ಅಡ್ಡೂರಿಲ್ಲಿ ವಶಕ್ಕೆ ಪಡೆದಿದ್ದಾರೆ.

ಅಲ್ಲದೆ ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯ ಸಲಹೆಯ ಮೇರೆಗೆ ಈ ಕುಟುಂಬದ ಸದಸ್ಯರನ್ನು ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಕ್ವಾರೆಂಟೈನ್‌ಗೊಳಪಡಿಸಲಾಗಿದೆ.

ಕಾಸರಗೋಡಿನಲ್ಲಿ ಕೊರೋನ ಸೋಂಕು ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ತಲಪಾಡಿ ಗಡಿಯನ್ನು ಆರಂಭದಲ್ಲೇ ಸಂಪೂರ್ಣ ಬಂದ್ ಮಾಡಲಾಗಿತ್ತು. ಈ ಮಧ್ಯೆ ಎರಡು ದಿನದ ಹಿಂದೆ ಕೆಲವು ಷರತ್ತುಗಳ ಮೇಲೆ ತುರ್ತು ಚಿಕಿತ್ಸೆಗಾಗಿ ಕೇರಳದ ರೋಗಿಗಳನ್ನು ಆ್ಯಂಬುಲೆನ್ಸ್‌ನಲ್ಲಿ ಕರೆತರಲು ತಲಪಾಡಿ ಗಡಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಮಧ್ಯೆ ಅಡ್ಡೂರಿನ ಯಾಕೂಬ್ ಮತ್ತವರ ಕುಟುಂಬದ 6 ಮಂದಿಯು ದೋಣಿ ಮೂಲಕ ಮಂಗಳೂರು ಪ್ರವೇಶಿಸಿದ್ದರು ಎನ್ನಲಾಗಿದೆ.

ಮೂಲತಃ ಅಡ್ಡೂರಿನ ಕಾಂಜಿಲಕೋಡಿ ನಿವಾಸಿಗಳಾಗಿದ್ದ ಯಾಕೂಬ್ ತನ್ನ ಪತ್ನಿಯ ತವರೂರಾದ ಮಂಜೇಶ್ವರಕ್ಕೆ ಈ ಹಿಂದೆ ಮಕ್ಕಳ ಸಮೇತ ತೆರಳಿದ್ದರು. ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಈ ಕುಟುಂಬ ಅಲ್ಲೇ ಬಾಕಿಯಾಗಿತ್ತು. ಈ ಮಧ್ಯೆ ತವರೂರಿನ ಸೆಳೆತದಿಂದಾಗಿ ಯಾಕೂಬ್ ತನ್ನ ಪತ್ನಿ ಮಕ್ಕಳನ್ನು ದೋಣಿಯ ಮೂಲಕ ಕರೆತರುವ ಸಾಹಸಕ್ಕಿಳಿದಿದ್ದರು. ಅದರಂತೆ ಶಾಕಿರ್ ಎಂಬವರ ಸಹಾಯ ಪಡೆದು ಮಂಜೇಶ್ವರದಿಂದ ಹೊರಟ ಈ ಕುಟುಂಬ ಗುರುವಾರ ಸಂಜೆ ಅಡ್ಡೂರಿಗೆ ಆಗಮಿಸಿತ್ತು. ಹಾಗೇ ಶುಕ್ರವಾರ ಕಾಂಜಿಲಕೋಡಿಯಲ್ಲಿ ಪಡಿತರ ಪಡೆಯಲೆಂದು ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಸ್ಥಳೀಯರು ಇವರನ್ನು ಗಮನಿಸಿ ಪೊಲೀಸರ ಗಮನಕ್ಕೆ ತಂದಿದ್ದರು.

ಬಜ್ಪೆಠಾಣೆಯ ಪೊಲೀಸರು ಈ ಕುಟುಂಬವನ್ನು ವಿಚಾರಣೆಗೆ ಒಳಪಡಿಸಿ ಮಂಜೇಶ್ವರದಿಂದ ದೋಣಿಯ ಮೂಲಕ ಅಡ್ಡೂರಿಗ ಪ್ರವೇಶಿಸಿರುವುದನ್ನು ಖಚಿತಪಡಿಸಿ ‘ಸಾಮಾಜಿಕ ಅಂತರ’ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಶಾಕಾರ್ಯಕರ್ತೆಯರ ಮೂಲಕ ಎಲ್ಲರನ್ನೂ ವೆನ್ಲಾಕ್‌ಗೆ ಕರೆದೊಯ್ದರು. ಬಳಿಕ ಈ ಕುಟುಂಬದ 7 ಮಂದಿಯನ್ನೂ ಇಎಸ್‌ಐ ಆಸ್ಪತ್ತೆಯಲ್ಲಿ ಕ್ವಾರೆಂಟೈನ್‌ಗೊಳಪಡಿಸಲಾಗಿದೆ.

ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News