×
Ad

ಪ್ರತಿಫಲಾಪೇಕ್ಷೆ ಇಲ್ಲದೇ ಸಾರ್ವಜನಿಕ ಸೇವೆಯಲ್ಲಿ ‘ಕೊರೋನ ಸೈನಿಕರು’

Update: 2020-04-10 18:28 IST

ಉಡುಪಿ, ಎ.10: ಇವರು ಬ್ರಹ್ಮಾವರದಲ್ಲಿ ಇಬ್ಬರೇ ವಾಸಿಸುವ ವೃದ್ಧ ದಂಪತಿ. ಕೊರೋನ ವೈರಸ್‌ನ ಲಾಕ್‌ಡೌನ್ ಕಾರಣದಿಂದ ಊರಿನ ಎಲ್ಲಾ ಅಂಗಡಿಗಳು ಬಂದ್. ತಾವೂ ಮನೆಯಿಂದ ಹೊರಗೆ ಹೋಗುವಂತಿಲ್ಲ. ಗಂಡನಿಗೆ ಸಕ್ಕರೆ ಕಾಯಿಲೆ, ಜೊತೆಗೆ ಹೃದಯ ಸಂಬಂಧಿ ಸಮಸ್ಯೆ. ದಂಪತಿಗೆ ಬ್ರೆಡ್ ಹಾಗೂ ರಸ್ಕ್‌ನ ಅಗತ್ಯವಿದೆ. ಇದನ್ನು ಅರಿತ ಯುವತಿಯೊಬ್ಬರಿಂದ ಕೇವಲ 20 ನಿಮಿಷಗಳಲ್ಲಿ ಬ್ರೆಡ್ ಮತ್ತು ರಸ್ತ್‌ನೊಂದಿಗೆ ಅವರು ಕೋರಿದ ಅಗತ್ಯ ವಸ್ತುಗಳು ನೇರವಾಗಿ ಮನೆಗೆ ಪೂರೈಕೆಯಾಗುತ್ತದೆ.

ಇನ್ನೊಂದು ಘಟನೆ ಕಾರ್ಕಳ ತಾಲೂಕಿನ ಗ್ರಾಮೀಣ ಪ್ರದೇಶದ್ದು. ಇಲ್ಲಿನ ರೋಗಿಯೊಬ್ಬರಿಗೆ ಅಗತ್ಯ ಔಷಧಿಗಳು ತುರ್ತಾಗಿ ಬೇಕಾಗಿದೆ. ಆದರೆ ಇದು ದೊರೆಯುವುದು ದೂರದ ಉಡುಪಿಯಲ್ಲಿ ಮಾತ್ರ. ಮನೆಯಲ್ಲಿ ಉಡುಪಿಗೆ ಹೋಗಿ ಔಷಧ ತರುವ ವ್ಯಕ್ತಿಗಳು ಯಾರೂ ಇಲ್ಲ. ರೋಗಿಯ ಸಮಸ್ಯೆ ಅರಿತ ಯುವಕನಿಂದ ಅವರಿಗೆ ಸಕಾಲದಲ್ಲಿ ಅಗತ್ಯ ಔಷಧಗಳು ಪೂರೈಕೆಯಾಗುತ್ತವೆ.

ಅಂಗಡಿಯೊಂದರ ಮುಂದೆ ದಿನಸಿ ವಸ್ತುಗಳು ಹಾಗೂ ಪಡಿತರ ವಿತರಣೆ ನಡೆಯುತ್ತಿದೆ. ಆದರೆ ಸರದಿ ಸಾಲಿನಲ್ಲಿ ನಿಂತಿರುವ ಜನರಲ್ಲಿ ಅಗತ್ಯ ವಾಗಿ ಪಾಲಿಸಲೇ ಬೇಕಾದ ಸಾಮಾಜಿಕ ಅಂತರ ಎಂಬುದೇ ಇಲ್ಲ. ಆಗ ಅಲ್ಲಿಗೆ ಆಗಮಿಸುವ ವ್ಯಕ್ತಿಯೊಬ್ಬ, ಸರದಿಯಲ್ಲಿ ನಿಂತಿದ್ದ ಎಲ್ಲರಿಗೂ ಕೊರೋನ ಕುರಿತು ಜಾಗೃತಿ ಮೂಡಿಸಿ, ಕೊರೋನ ಹರಡುವಿಕೆಯ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅಗತ್ಯತೆ ಯನ್ನು ಮನದಟ್ಟು ಮಾಡಿಕೊಟ್ಟ ನಂತರ, ಜನರು ಪರಸ್ಪರ ನಿಗದಿತ ಅಂತರದಲ್ಲಿ ನಿಂತುಕೊಂಡು ದಿನಸಿ ವಸ್ತುಗಳು ಮತ್ತು ಪಡಿತರ ವಸ್ತುಗಳನ್ನು ಪಡೆಯುತ್ತಾರೆ.

ಕೊರೋನ ರೋಗ ಹಾಗೂ ರೋಗಿಗಳ ಬಗ್ಗೆ, ಶಂಕಿತರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಮಾದ್ಯಮಗಳಲ್ಲಿ ತೀರಾ ಅತಿರೇಕ ಎಂಬಂಥ ಸುದ್ದಿಗಳು ಬಂದು ಸಾರ್ವಜನಿಕರು ಅದನ್ನು ನಿಜವೆಂದು ನಂಬುವ ಸಂದರ್ಭದಲ್ಲಿ, ಯುವಕನೊಬ್ಬ ಅದೇ ಸಾಮಾಜಿಕ ಜಾಲತಾಣದಲ್ಲಿ, ಖಚಿತ ಸಾಕ್ಷ್ಯಾಧಾರಗಳ ಮೂಲಕ ಆ ಸುದ್ದಿಗಳು ಸುಳ್ಳು ಎಂದು ತಿಳಿಸಿ, ಸಾರ್ವಜನಿಕರಲ್ಲಿದ್ದ ಭೀತಿಯನ್ನು ನಿವಾರಿಸುತ್ತಾನೆ.

ಮೇಲಿನ ಈ ಎಲ್ಲಾ ಕಾರ್ಯಗಳನ್ನು ಮಾಡುತ್ತಿರುವುದು ಯಾವುದೋ ಸ್ವಯಂಸೇವಾ ಸಂಘಟನೆಯಲ್ಲ. ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಕಾರ್ಮಿಕ ತರಬೇತಿ ಸಂಸ್ಥೆ, ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ರಚಿಸಲಾಗಿ ರುವ ‘ಕೊರೋನ ಸೈನಿಕರ ತಂಡ’ದ ಉಡುಪಿ ಜಿಲ್ಲೆಯ ಕೊರೋನ ಸೈನಿಕರು ಜಿಲ್ಲೆಯಾದ್ಯಂತ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ‘ಕೊರೋನ ಸಂಕಷ್ಟ’ದ ವೇಳೆಯಲ್ಲಿ ಮಾಡುತ್ತಿರುವ ಸಾಮಾಜಿ ಸೇವೆಯ ಕೆಲವು ಝಲಕುಗಳು.

ರಾಜ್ಯದಲ್ಲಿ ಸುಮಾರು 20,000ಕ್ಕೂ ಅಧಿಕ ಮಂದಿ , ಕೊರೋನ ಸೈನಿಕರಾಗಿ ಕಾರ್ಯ ನಿರ್ವಹಿಸಲು ನೊಂದಾಯಿಸಿಕೊಂಡಿದ್ದು, ಉಡುಪಿ ಜಿಲ್ಲೆಯೊಂದರಲ್ಲೇ 260ಕ್ಕೂ ಅಧಿಕ ಮಂದಿ ಕೊರೋನ ಸೈನಿಕರಾಗಿ ದುಡಿಯಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಇವರಲ್ಲಿ ವೈದ್ಯರು, ಇಂಜಿನಿಯರ್‌ಗಳು, ಟೆಕ್ಕಿಗಳು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿಗಳಿದ್ದಾರೆ. ಜಿಲ್ಲೆಯ ಏಳು 7 ತಾಲೂಕುಗಳಲ್ಲಿ ಪ್ರತ್ಯೇಕ ವಾಟ್ಸಾಪ್ ಗ್ರೂಪ್‌ಗಳನ್ನು ಮಾಡಿಕೊಂಡು ಇವರು ತಮ್ಮ ವ್ಯಾಪ್ತಿಯಲ್ಲಿ ಬರುವ ಕೊರೋನಾ ಕುರಿತ ಸಮಸ್ಯೆಗಳನ್ನು ಎದುರಿಸು ವವರಿಗೆ ಅಗತ್ಯ ನೆರವು ನೀಡುತ್ತಿದ್ದಾರೆ.

ಪ್ರಧಾನವಾಗಿ ಈ ಕೊರೋನಾ ಸೈನಿಕರು ಎಲ್ಲಾ ಸಾಮಾಜಿಕ ಜಾಲತಾಣ ಗಳಲ್ಲಿ ಸಕ್ರಿಯರಾಗಿದ್ದು, ಕೊರೋನಾ ಕುರಿತ ಯಾವುದೇ ಸುಳ್ಳು ಮತ್ತು ಅತಿರೇಕದ ಸುದ್ದಿಗಳು ಬಂದಲ್ಲಿ, ಅದನ್ನು ಬೆಂಗಳೂರಿನಲ್ಲಿರುವ ಕೋರೊನಾ ವಾರಿಯರ್ಸ್‌ನ ಪ್ರಮುಖರಿಗೆ ತಲುಪಿಸುತ್ತಾರೆ. ಅಲ್ಲಿನ ಪ್ರಮುಖರು ಈ ಸುದ್ದಿಗಳ ಕುರಿತು ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳ ಮೂಲಕ ಮಾಹಿತಿ ಪಡೆದು ಈ ಬಗ್ಗೆ ಸ್ಪಷ್ಟನೆಯನ್ನು ನೀಡುತ್ತಾರೆ. ಈ ಸ್ಪಷ್ಟನೆಯನ್ನು ಸುಳ್ಳು ಸುದ್ದಿ ಸೃಷ್ಟಿಯಾದ ಮಾಧ್ಯಮದ ಮೂಲಕವೇ ಸಾರ್ವಜನಿಕರಿಗೆ ನಿಜವಾದ ಮಾಹಿತಿಯನ್ನು ನೀಡುವ ಕೆಲಸವನ್ನು ಕೊರೆನ ಸೈನಿಕರ ತಂಡ ಮಾಡುತ್ತಿದೆ.

ಉಡುಪಿ ಕಾರ್ಮಿಕ ಇಲಾಖೆ ಮತ್ತು ರೆಡ್‌ಕ್ರಾಸ್ ವತಿಯಿಂದ ಉಡುಪಿ ಜಿಲ್ಲೆಯಲ್ಲಿರುವ ಸುಮಾರು 15,000 ಅಸಂಘಟಿತ ಕಾರ್ಮಿಕರಿಗೆ ಕೊರೋನ ನಿಯಂತ್ರಣ ಕ್ರಮವಾಗಿ ಸೋಪುಗಳು, ಮಾಸ್ಕ್‌ಗಳು ಹಾಗೂ ಮಾಹಿತಿ ಕರಪತ್ರ ಗಳನ್ನು ವಿತರಿಸುವಲ್ಲಿ ಜಿಲ್ಲೆಯ ಕೊರೋನಾ ಸೈನಿಕರು ಪ್ರಮುಖ ಪಾತ್ರ ವಹಿಸಿದ್ದಾರೆ.ದೇಶ ಕಾಯವ ಯೋಧರಂತೆ, ಯಾವುದೇ ವಿಧದ ಆಯುಧಗಳನ್ನು ಹಿಡಿಯದ ಈ ಸೈನಿಕರು ದಿನದ ಯಾವುದೇ ಸಮಯದಲ್ಲಿ, ಸಾರ್ವಜನಿಕರಿಗೆ ತಮ್ಮಿಂದಾದ ಸಹಾು ಮಾಡಲು ಸಧಾ ಸಿದ್ದವಾಗಿರುತ್ತಾರೆ.

ಉಡುಪಿ ಜಿಲ್ಲೆಯ ಕೊರೋನ ಸೈನಿಕರು, ಸಾರ್ವಜನಿಕರಿಂದ ಬರುವ ಸಮಸ್ಯೆಗಳಿಗೆ ಶೀಘ್ರದಲ್ಲಿ ಸ್ಪಂದಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಪ್ರಮುಖ ಸಂಘಟಕರಾಗಿ ಸುಕೇತ್ ಶೆಟ್ಟಿ (ಮೊ:8310155994) ಕಾರ್ಯ ನಿರ್ವಹಿ ಸುತ್ತಿದ್ದು, ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಬೆಂಗಳೂರಿನಲ್ಲಿ ಸಹನಾ (9164448287) ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಕೊರೊನಾ ಸೈನಿಕರು ಪರಸ್ಪರ ಸಮನ್ವಯದಿಂದ, ಜಿಲ್ಲೆಯ ಯಾವುದೇ ಭಾಗದಿಂದ ಬರುವ ಸಮಸ್ಯೆ ಗಳಿಗೆ ತಕ್ಷಣವೇ ಸೂಕ್ತ ಸ್ಪಂದನೆ ತೋರುತಿದ್ದು, ವೈದ್ಯಕೀಯ ತುರ್ತು ಪರಿಸ್ಥಿತಿಯ ಈ ಕಾಲದಲ್ಲಿ ಸಾರ್ವಜನಿಕರಿೆ ನಿಸ್ವಾರ್ಥ ಸೇವೆ ಸಲ್ಲಿಸುತಿದ್ದಾರೆ.

ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊರೋನ ಸೈನಿಕ ತಂಡ, ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್, ಟೆಲಿಗ್ರಾಂನಲ್ಲಿ ಸಹಾಯ ಕೋರಿ ಬರುವ ರಾಜ್ಯದ ಎಲ್ಲಾ ಭಾಗಗಳ ಸಾರ್ವಜನಿಕರ ಸಮಸ್ಯೆಗಳನ್ನು, ಸಂಬಂದಪಟ್ಟ ತಾಲೂಕಿನ ಕೊರೋನಾ ಸೈನಿಕರಿಗೆ ತಲುಪಿಸುವ ಮೂಲಕ ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲಾಗುತ್ತಿದೆ ಎನ್ನುತ್ತಾರೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಹನಾ.

ಕೊರೋನ ಸೈನಿಕರು ಜನಸಾಮಾನ್ಯರ ಸಂಕಷ್ಟ, ತುರ್ತು ಬೇಡಿಕೆಗಳಿಗೆ ಸ್ಪಂದಿಸುವುದು ಮಾತ್ರವಲ್ಲದೇ, ಜಿಲ್ಲಾಡಳಿತ ಸೂಚಿಸುವ ಇತರೇ ಯಾವುದೇ ಕಾರ್ಯಗಳನ್ನು ನಿರ್ವಹಿಸಲು ಸಹ ಸದಾ ಸಿದ್ದವಾಗಿರುತ್ತಾರೆ ಎನ್ನುವ ಉಡುಪಿ ಜಿಲ್ಲಾ ಸಂಘಟಕ ಸುಕೇತ್ ಶೆಟ್ಟಿ, ಜಿಲ್ಲೆಯ ಯಾವುದೇ ಭಾಗದ ಸಾರ್ವಜನಿಕರು ಯಾವುದೇ ಸಮಯದಲ್ಲಿ ಸಂಪರ್ಕಿಸಿದಲ್ಲಿ , ಅವರ ಸಮಸ್ಯೆಗೆ ಅಗತ್ಯ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಮ್ಮ ತಂಡ ಸದಾ ಸಿದ್ದವಿದೆ ಎನ್ನುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News