ಕೊರೋನ ಸೋಂಕಿನಿಂದ ಸಂಪೂರ್ಣ ಗುಣಮುಖ: ಬೆಳ್ತಂಗಡಿ ತಾಲೂಕಿನ ಯುವಕ ವೆನ್ಲಾಕ್‌ನಿಂದ ಬಿಡುಗಡೆ

Update: 2020-04-10 13:38 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಎ.10 : ಕೊರೋನ ಸೋಂಕಿಗೊಳಗಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21ರ ಹರೆಯದ ಯುವಕ ಸಂಪೂರ್ಣ ಗುಣಮುಖನಾಗಿದ್ದು, ಆತನನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದೆ. ಇದರೊಂದಿಗೆ ಭಟ್ಕಳದ ಓರ್ವ ಮತ್ತು ಕಾಸರಗೋಡಿನ ಮೂವರ ಸಹಿತ ಒಟ್ಟು 5 ಮಂದಿ ಕೊರೋನ ಸೋಂಕು ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಂತಾಗಿದೆ.

ದುಬೈಯಲ್ಲಿದ್ದ ಈ ಯುವಕ ಮಾ. 21ರಂದು ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿದ್ದ. ಬಳಿಕ ಅಲ್ಲಿಂದ ಕೆಎಸ್ಸಾರ್ಟಿಸಿ ಬಸ್ ಮೂಲಕ ಊರಿಗೆ ಬಂದಿದ್ದ. ಜ್ವರ ಮತ್ತು ಕೆಮ್ಮುವಿನಿಂದ ಬಳಲುತ್ತಿದ್ದ ಈತನನ್ನು ಮಾ. 24ರಂದು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಈತನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಾ.27ರಂದು ಕೊರೋನ ಸೋಂಕು ತಗುಲಿರುವುದು ದೃಢಗೊಂಡಿತ್ತು.

ಬಳಿಕ ಎ.7 ಮತ್ತು 8ರಂದು ಗಂಟಲಿನ ದ್ರವ ಪರೀಕ್ಷೆ ನಡೆಸಲಾಗಿತ್ತು. ಎರಡೂ ವರದಿಯಲ್ಲಿ ನೆಗೆಟಿವ್ ಬಂದ ಕಾರಣ ಇದೀಗ ಬಿಡುಗಡೆ ಮಾಡಲಾಗಿದೆ. ಇನ್ನೀಗ ವೆನ್ಲಾಕ್‌ನಲ್ಲಿ 5 ಮಂದಿ ಮತ್ತು ಮಗು ಸಹಿತ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಕೈಗೆ ಸೀಲ್ ಹಾಕಲಾಗುತ್ತದೆ. ಕಡ್ಡಾಯವಾಗಿ 28 ದಿನಗಳ ಕಾಲ ಮನೆಯಲ್ಲಿ ಕ್ವಾರೆಂಟೈನ್‌ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಸ್ಥಳೀಯ ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿಯು ಇವರ ಮೇಲೆ ನಿಗಾ ಇರಿಸಲಿದ್ದಾರೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸದಾಶಿವ ಶಾನ್‌ಭೋಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News