ಜಿಡಿಪಿ ಬೆಳವಣಿಗೆ ದರವನ್ನು ಅತಿಯಾಗಿ ಅಂದಾಜಿಸಲಾಗಿತ್ತು: ಕೊನೆಗೂ ಒಪ್ಪಿಕೊಂಡ ಆರ್‌ಬಿಐ

Update: 2020-04-10 15:52 GMT

ಹೊಸದಿಲ್ಲಿ, ಎ.10: ಕೊರೋನ ವೈರಸ್ ಹಾವಳಿಯು ದೇಶದ ಆರ್ಥಿಕತೆಯನ್ನು ಬಿಕ್ಕಟ್ಟಿಗೆ ಸಿಲುಕಿಸುವ ಮುನ್ನವೇ, 2019-20ನೇ ಸಾಲಿನಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದರ ಬೆಳವಣಿಗೆಯನ್ನು ತಾನು ಅತಿಯಾಗಿ ಅಂದಾಜು ಮಾಡಿದ್ದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಒಪ್ಪಿಕೊಂಡಿದೆ.

2020ರ ಎಪ್ರಿಲ್ ತಿಂಗಳ ವಿತ್ತೀಯ ನೀತಿ ವರದಿಯಲ್ಲಿ ಆರ್‌ಬಿಐ ಇದನ್ನು ಒಪ್ಪಿಕೊಂಡಿದೆ.

2019-20ರ ಸಾಲಿನ ಮೂರನೆ ತ್ರೈಮಾಸಿಕದಲ್ಲಿ ಸರಕಾರದ ಅಂಕಿಅಂಶಗಳು ಜಿಡಿಪಿ ಬೆಳವಣಿಗೆ ದರವನ್ನು ಕಳೆದ 27 ತ್ರೈಮಾಸಿಕಗಳಲ್ಲೇ ಅತ್ಯಂತ ಕನಿಷ್ಠ, ಅಂದರೆ 4.7 ಶೇಕಡಕ್ಕೆ ಇಳಿಸಿದ್ದವು. ಆರ್‌ಬಿಐ ತನ್ನ ಅಕ್ಟೋಬರ್ 2019ನೇ ಸಾಲಿನ ವಿತ್ತೀಯ ನೀತಿ ವರದಿಯಲ್ಲಿ ದ್ವಿತೀಯ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರವನ್ನು ಶೇ.5.3ಕ್ಕೆ ಹಾಗೂ ಮೂರನೆ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆಯನ್ನು ಶೇಕಡ 6.6ಕ್ಕೆ ಇಳಿಸಿತ್ತು.

ರಾಷ್ಟ್ರೀಯ ಅಂಕಿಅಂಶ ಕಾರ್ಯಾಲಯವು ತನ್ನ 2020-21ನೇ ಸಾಲಿನ ಎರಡನೆ ಎರಡನೇ ಹಾಗೂ ಮೂರನೆ ತ್ರೈಮಾಸಿಕದಲ್ಲಿ ಎರಡನೆ ಮುಂಗಡ ಅಂದಾಜುಗಳನ್ನು ಕ್ರಮವಾಗಿ 20 ಹಾಗೂ 190 ಮೂಲಾಂಶ (ಬೇಸಿಸ್ ಪಾಯಿಂಟ್)ಗಳಿಗೆ ಇಳಿಸಿದೆ ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ.

ಉತ್ಪನ್ನಗಳಿಗೆ ದುರ್ಬಲ ಗ್ರಾಮಾಂತರ ಬೇಡಿಕೆ, ಗ್ರಾಮೀಣ ವೇತನ ಕುಸಿತ ಹಾಗೂ ಕಾರ್ಮಿಕ ಕೇಂದ್ರೀತ ರಫ್ತು ಕ್ಷೇತ್ರದಲ್ಲಿ ಹಿನ್ನಡೆಯ ಕಾರಣದಿಂದಾಗಿ ದ್ವಿತೀಯ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತ ಕಂಡುಬಂದಿರುವುದಾಗಿ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News