ಲಾಕ್‌ಡೌನ್ ನಿರ್ವಹಣೆಯಲ್ಲಿ ಮಣಿಪುರ ಸಿಎಂ ವಿಫಲ ಆರೋಪ: ಖಾತೆಗಳನ್ನು ತೊರೆದ ಡಿಸಿಎಂ

Update: 2020-04-10 16:33 GMT

ಇಂಫಾಲ, ಎ.10: ಲಾಕ್‌ಡೌನ್ ಸಂದರ್ಭದಲ್ಲೇ ಬಿಜೆಪಿ ನೇತೃತ್ವದ ಮಣಿಪು ಮೈತ್ರಿಸರಕಾರದಲ್ಲಿ ಬಂಡಾಯದ ಬಿರುಗಾಳಿಯೆದ್ದಿದೆ. ಲಾಕ್‌ಡೌನ್ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಎನ್.ಬಿರೇನ್‌ ಸಿಂಗ್ ವಿಫಲರಾಗಿದ್ದಾರೆಂದು ಟೀಕಿಸಿದ್ದ ಮಣಿಪುರದ ಉಪಮುಖ್ಯಮಂತ್ರಿ ವೈ.ಜಯ್‌ ಕುಮಾರ್ ಸಿಂಗ್ ಗುರುವಾರ ತನ್ನ ಬಳಿಯಿದ್ದ ಎಲ್ಲಾ ಖಾತೆಗಳನ್ನು ತೊರೆದಿದ್ದಾರೆ.

ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯದ ಜನತೆಗೆ ಆಹಾರ ಭದ್ರತೆಯನ್ನು ಖಾತರಿಪಡಿಸುವ ಮುಖ್ಯಮಂತ್ರಿಯ ಭರವಸೆಯು ಅರ್ಥಹೀನ ಹಾಗೂ ವಿವೇಕರಹಿತವಾದುದೆಂದು ಜಯ್‌ ಕುಮಾರ್‌ ಸಿಂಗ್ ಟೀಕಿಸಿದ್ದರು.

ಮುಖ್ಯಮಂತ್ರಿ ಎನ್.ಬಿರೇನ್‌ಸಿಂಗ್ ಅವರ ನಾಯಕತ್ವದಲ್ಲಿ ತೃಪ್ತಿಯಿಲ್ಲದೆ ಇದ್ದಲ್ಲಿ ಸಂಪುಟಕ್ಕೆ ರಾಜೀನಾಮೆ ನೀಡಬಹುದೆಂದು ರಾಜ್ಯ ಸರಕಾರದ ವಕ್ತಾರ ಹಾಗೂ ಶಾಸಕ ಎಸ್.ರಾಜೆನ್ ಅವರು ಆಡಳಿತಾರೂಢ ಮೈತ್ರಿಕೂಟದ ಅಂಗಪಕ್ಷವಾದ ನ್ಯಾಶನಲ್ ಪೀಪಲ್ಸ್ ಪಾರ್ಟಿಯ ನಾಲ್ವರು ಸಚಿವರಿಗೆ ಸವಾಲೆಸೆದ ಬೆನ್ನಲ್ಲೇ ಜಯ್‌ಕುಮಾರ್‌ಸಿಂಗ್ ತನ್ನ ಸಚಿವ ಖಾತೆಗಳನ್ನು ತೊರೆದಿದ್ದಾರೆ.

ರಾಷ್ಟ್ರೀಯ ಆಹಾರಭದ್ರತಾ ಕಾಯ್ದೆಯಡಿ ತನ್ನ ಸ್ವಕ್ಷೇತ್ರ ಉರಿಪೊಕ್‌ಗೆ ಅಕ್ಕಿ ವಿತರಣೆಯಲ್ಲಿ ಕೊರತೆಯುಂಟಾಗಿರುವ ಬಗ್ಗೆ ಜಯ್‌ಕುಮಾರ್ ಅವರು ತೀವ್ರ ಅಸಮಾಧಾನಗೊಂಡಿದ್ದರೆನ್ನಲಾಗಿದೆ.

ಸಿಎಂ ಅವರ ಕಾರ್ಯನಿರ್ವಹಣೆಯನ್ನು ಟೀಕಿಸಿದ್ದಕ್ಕಾಗಿ ಜಯ್‌ಕುಮಾರ್ ವಿರುದ್ಧ ತೀವ್ರವಾಗ್ದಾಳಿ ನಡೆಸಿದ್ದ ರಾಜೆನ್ ಅವರು, ಉಪಮುಖ್ಯಮಂತ್ರಿಯ ವರ ಹೇಳಿಕೆ ಬೇಜವಾಬ್ದಾರಿಯದ್ದು ಹಾಗೂ ಅವರು ತನ್ನ ಮಿತಿಯನ್ನು ದಾಟಿದ್ದಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಬಿರೇನ್‌ ಸಿಂಗ್ ನೇತೃತ್ವದ ಮೈತ್ರಿ ಸರಕಾರದಲ್ಲಿ ಎನ್‌ಪಿಪಿಯು ಪ್ರಮುಖ ಜೊತೆಗಾರ ಪಕ್ಷಗಳಲ್ಲೊಂದಾಗಿದೆ. ಬಿಜೆಪಿ ಹಾಗೂ ಅದರ ಜೊತೆಗಾರ ಪಕ್ಷಗಳ ಅನೇಕ ಶಾಸಕರು ಸಂಪುಟ ಪುನಾರಚನೆಗಾಗಿ ಒತ್ತಡ ಹೇರುತ್ತಿದ್ದಾರೆ. ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಕಾಂಗ್ರೆಸ್ ಶಾಸಕರೊಬ್ಬರನನ್ನು ಸುಪ್ರೀಂಕೋರ್ಟ್‌ನ ಆದೇಶದನುಸಾರ ಸ್ಪೀಕರ್ ವೈ.ಖೇಮ್‌ಚಂದ್ ಅನರ್ಹಗೊಳಿಸಿದ್ದರಿಂದ 60 ಸದಸ್ಯರ ಮಣಿಪುರ ವಿಧಾನಸಭೆಯ ಬಲ 59ಕ್ಕೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News