ಕಾಸರಗೋಡು: ಕೋವಿಡ್ ವಾರ್ಡ್‌ನಲ್ಲಿ ಅಡ್ಡಾಡುತ್ತಿದ್ದ 5 ಬೆಕ್ಕುಗಳ ನಿಗೂಢ ಸಾವು!

Update: 2020-04-10 16:13 GMT
ಸಾಂದರ್ಭಿಕ ಚಿತ್ರ

ತಿರುವನಂತಪುರ, ಎ.10: ಕೊರೋನಾ ವೈರಸ್‌ನ ಆರ್ಭಟಕ್ಕೆ ತತ್ತರಿಸಿರುವ ಕೇರಳದ ಕಾಸರಗೋಡಿನ ಆಸ್ಪತ್ರೆಯೊಂದರಲ್ಲಿ ಸೋಂಕು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವ ವಾರ್ಡ್‌ನಲ್ಲಿ ಅಲೆದಾಡುತ್ತಿದ್ದ 5 ಬೆಕ್ಕುಗಳು ಸತ್ತುಬಿದ್ದಿರುವುದು ಪತ್ತೆಯಾಗಿದೆ. ಎರಡು ಗಂಡುಬೆಕ್ಕು, ಒಂದು ಹೆಣ್ಣು ಹಾಗೂ ಎರಡು ಮರಿಬೆಕ್ಕುಗಳು ಮೃತಪಟ್ಟಿದ್ದು, ಅವುಗಳ ದೇಹದ ಅಂಗಗಳನ್ನು ಪಶುಸಂಗೋಪನಾ ಇಲಾಖೆಯು ತಿರುವನಂತಪುರದಲ್ಲಿರುವ ರಾಜ್ಯ ಪ್ರಾಣಿ ರೋಗ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದೆ.

ಆದಾಗ್ಯೂ ಮೃತಬೆಕ್ಕುಗಳ ಪ್ರಾಥಮಿಕ ಹಂತದ ಮರಣೋತ್ತರ ಪರೀಕ್ಷೆಯಲ್ಲಿ ಅವುಗಳಿಗೆ ಕೊರೋನ ಸೋಂಕು ತಗಲಿರುವ ಬಗ್ಗೆ ಯಾವುದೇ ಸುಳಿವು ಪತ್ತೆ ಯಾಗಿಲ್ಲವೆಂದು ಕಾಸರಗೋಡು ಜಿಲ್ಲಾ ಪ್ರಾಣಿರೋಗ ಕುರಿತ ಕಾಸರಗೋಡು ಜಿಲ್ಲಾ ಸಮನ್ವಯಕಾರ ಡಾ. ಟಿಟೋ ಜೋಸೆಫ್ ತಿಳಿಸಿದ್ದಾರೆ.

ಕೋವಿಡ್-19 ವಾರ್ಡ್‌ಗಳಲ್ಲಿ ಅಡ್ಡಾಡುತ್ತಿದ್ದ ಈ ಬೆಕ್ಕುಗಳನ್ನು ಜಿಲ್ಲಾಧಿಕಾರಿಯವರ ಆದೇಶದಂತೆ ಪಶುಸಂಗೋಪನಾ ಇಲಾಖೆಯು ವಶಕ್ಕೆ ತೆಗೆದುಕೊಂಡಿತ್ತು. ಆನಂತರ ಈ ಬೆಕ್ಕುಗಳನ್ನು ಕಾಸರಗೋಡಿನ ಪ್ರಾಣಿ ಜನನ ನಿಯಂತ್ರಣ ಕೇಂದ್ರಕ್ಕೆ ಒಯ್ಯಲಾಗಿತ್ತು. ಅಲ್ಲಿ ಅವುಗಳನ್ನು ಅಲ್ಪಸ್ವಲ್ಪ ಗಾಳಿ ಸಂಚಾರವಿರುವ ಸಣ್ಣ ಕ್ರೇಟ್ ಒಂದರಲ್ಲಿ ಇರಿಸಿದ್ದರಿಂದ ಅವು ಉಸಿರುಗಟ್ಟಿ ಸಾವನ್ನಪ್ಪಿರುವ ಸಾಧ್ಯತೆಯೂ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಅಮೆರಿಕದ ನ್ಯೂಯಾರ್ಕ್ ನಗರದ ಮೃಗಾಲಯವೊಂದರಲ್ಲಿ ಹುಲಿಯೊಂದಕ್ಕೆ ಕೊರೋನಾ ವೈರಸ್ ಸೋಂಕು ದೃಢಪಟ್ಟ ಘಟನೆಯ ಬಳಿಕ ಭಾರತದಕೇಂದ್ರೀಯ ಮೃಗಾಲಯ ಪ್ರಾಧಿಕಾರವು ಈ ಬಗ್ಗೆ ರೆಡ್ ಆಲರ್ಟ್ ಹೊರಡಿಸಿತ್ತು. ಹದಿನೈದು ದಿನಕ್ಕೊಮ್ಮೆ ಪ್ರಾಣಿಗಳ ಪರೀಕ್ಷಾ ಮಾದರಿಗಳನ್ನು ಕಳುಹಿಸುವಂತೆ ದೇಶದ ಎಲ್ಲಾ ಮೃಗಾಲಯಗಳಿಗೆ ಸೂಚನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News