ರೈಲ್ವೇ ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್: ಮಂಗಳೂರು ಸೆಂಟ್ರಲ್‌ನಲ್ಲಿ 20 ರೈಲ್ವೇ ಬೋಗಿಗಳು ಸಿದ್ಧ

Update: 2020-04-10 16:26 GMT

ಮಂಗಳೂರು, ಎ. 10: ಕೊರೋನ ಸೋಂಕಿತರ ಪ್ರಮಾಣ ಹೆಚ್ಚಾದಲ್ಲಿ ಸೂಕ್ತ ಚಿಕಿತ್ಸೆ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆಯ ಆದೇಶದ ಮೇರೆಗೆ ಬೋಗಿಗಳನ್ನು ಐಸೋಲೇಶನ್ ವಾರ್ಡ್‌ಗಳಾಗಿ ಪರಿವರ್ತಿಸುವ ಕಾರ್ಯ ನಡೆದಿದೆ. ಇದೀಗ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಇಂತಹ 20 ರೈಲ್ವೇ ಬೋಗಿಗಳು ಬಳಕೆಗೆ ಸಿದ್ಧಗೊಂಡಿವೆ.

ಸದ್ಯ ದಕ್ಷಿಣ ಕನ್ನಡದಲ್ಲಿ ಕೊರೋನ ಸೋಂಕು ಕನಿಷ್ಠ ಪ್ರಮಾಣದಲ್ಲಿ ಇರುವ ಕಾರಣದಿಂದ ಐಸೋಲೇಶನ್ ರೈಲ್ವೇ ಬೋಗಿಗಳ ವಾರ್ಡ್ ಗಳು ಆವಶ್ಯಕತೆ ಇರುವ ಪ್ರದೇಶಗಳಿಗೆ ರವಾನೆಯಾಗುವ ನಿರೀಕ್ಷೆಯಿದೆ. ವೈದ್ಯಕೀಯ ತಜ್ಞರ ವಿಭಾಗದ ಮಾರ್ಗಸೂಚಿಯಂತೆ ರೈಲು ಬೋಗಿಗಳನ್ನು ಸಿದ್ಧಗೊಳಿಸಲಾಗಿದೆ.

20 ಬೋಗಿಗಳು ತಲಾ 16 ಬೆಡ್‌ಗಳನ್ನು ಹೊಂದಿರಲಿವೆ. ಎಲ್ಲ ಬೆಡ್‌ಗಳು ಸುರಕ್ಷಾ ನೆಟ್ ಒಳಗೊಂಡಿರುತ್ತವೆ. ಬೋಗಿಯ ಸ್ಲೀಪರ್ ಕೋಚ್‌ಗಳ ನಡುವಿನ ಮಲಗುವ ಬರ್ತ್‌ಗಳನ್ನು ತೆಗೆದು ಕೆಳಗಿನ ಬರ್ತ್ ಅನ್ನು ಪೂರ್ಣ ಪ್ರಮಾಣದ ಹಾಸಿಗೆಯಾಗಿ ಬದಲಿಸಲಾಗಿದೆ.

ಪ್ರತೀ ಬೋಗಿಯಲ್ಲಿ ವೈದ್ಯರು, ದಾದಿಯರು ಹಾಗೂ ಸಹಾಯಕ ಸಿಬ್ಬಂದಿ ವಿಶ್ರಾಂತಿ ಕೊಠಡಿ ಇರುತ್ತದೆ. ಕೆಲವು ಟಾಯ್ಲೆಟ್‌ಗಳನ್ನು ಸ್ನಾನಗೃಹಗಳಾಗಿ ಪರಿವರ್ತಿಸಲಾಗಿದೆ. ಎಲ್ಲ ಬೋಗಿಗಳಲ್ಲಿ ಯುರೋಪಿಯನ್ ಹಾಗೂ ಸಾಮಾನ್ಯ ಮೊಡಾಗಳು (ಟಾಯ್ಲೆಟ್) ಇರುತ್ತವೆ.

ಟಾಯ್ಲೆಟ್ ಹಾಗೂ ಸ್ನಾನಗೃಹಗಳಲ್ಲಿರುವ ನೀರಿನ ನಳ್ಳಿಗಳನ್ನು ಅಡಿಯಲ್ಲಿ ಬಕೆಟ್ ಇಡಲು ಅನುಕೂಲವಾಗುವಂತೆ ಎತ್ತರಿಸಲಾಗಿದೆ. ಮೊಬೈಲ್, ಲ್ಯಾಪ್ ಟಾಪ್ ಚಾರ್ಜ್ ಮಾಡಲು ವ್ಯವಸ್ಥೆ ಇದೆ. ವೈದ್ಯಕೀಯ ಉಪಕರಣಗಳ ಬಳಕೆಗೆ ಅನುಕೂಲವಾಗುವಂತೆ 230 ವೋಲ್ಟ್ ಸಾಮರ್ಥ್ಯ ತನಕದ ವಿದ್ಯುತ್ ಪೂರೈಕೆ ವ್ಯವಸ್ಥೆ, ಡಸ್ಟ್ ಬಿನ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಈ ವಿಶೇಷ ಬೋಗಿಗಳು ಒಳಗೊಂಡಿರುತ್ತವೆ ಎಂದು ರೈಲ್ವೇ ಇಲಾಖೆ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News