×
Ad

ಮೃತದೇಹ ಬಿಟ್ಟುಕೊಡಲು ನಿರಾಕರಿಸಿದ ಆಸ್ಪತ್ರೆಯ ಆಡಳಿತ ಮಂಡಳಿ: ಡಿವೈಎಫ್‌ಐ ಆರೋಪ

Update: 2020-04-10 22:10 IST

ಮಂಗಳೂರು, ಎ.10: ಬಿಲ್ ಸಂಪೂರ್ಣ ಪಾವತಿ ಮಾಡುವಂತೆ ಒತ್ತಾಯಿಸಿ ರೋಗಿಯ ಮೃತದೇಹವನ್ನು ಬಿಟ್ಟುಕೊಡಲು ನಿರಾಕರಿಸಿದ ಅಮಾನವೀಯ ಘಟನೆಯು ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ದ.ಕ.ಜಿಲ್ಲಾ ಡಿವೈಎಫ್‌ಐ ಆರೋಪಿಸಿದೆ. ಈ ಮಧ್ಯೆ ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮಧ್ಯಪ್ರವೇಶದಿಂದ ಪ್ರಕರಣವು ಸುಖಾಂತ್ಯಗೊಂಡಿವೆ.

ಅನಾರೋಗ್ಯ ಪೀಡಿತ ಬಂಟ್ವಾಳದ ಲಕ್ಷ್ಮಣ ಭಂಡಾರಿ (48) ಎಂಬವರನ್ನು ಮಾ.28ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ಸೂಕ್ತ ಮಾಹಿತಿಯ ಕೊರತೆಯಿಂದ ಖಾಸಗಿ ಆಸ್ಪತ್ರೆಯವರು ಮುಂಗಡ ಹಣ 80,000 ರೂ. ಪಾವತಿಸಲು ಸೂಚಿಸಿದಾಗ ಲಕ್ಷ್ಮಣರ ಕುಟುಂಬಸ್ಥರು ತಮ್ಮಲ್ಲಿದ್ದ ಒಡವೆಗಳನ್ನು ಅಡವಿಟ್ಟಿದ್ದರು. ಆದರೆ ಲಕ್ಷ್ಮಣ ಭಂಡಾರಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದರು. ಮೃತದೇಹ ಬಿಟ್ಟುಕೊಡಬೇಕಿದ್ದರೆ 55,000 ರೂ. ಕಟ್ಟಬೇಕು ಎಂದು ಆಸ್ಪತ್ರೆಯವರು ಸೂಚಿಸಿದ್ದರು. ತೀರಾ ಸಂಕಷ್ಟದಲ್ಲಿದ್ದ ಕುಟುಂಬವು ಹಣ ಪಾವತಿಸಲಾಗದೆ ತಮ್ಮ ಅಳಲನ್ನು ಡಿವೈಎಫ್‌ಐ ಮುಖಂಡರ ಮುಂದೆ ತೋಡಿಕೊಂಡರು. ಅದರಂತೆ ಡಿವೈಎಫ್‌ಐ ಮುಖಂಡರು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಯ ಗಮನ ಸೆಳೆದರು. ತಕ್ಷಣ ಕಾರ್ಯಪ್ರವೃತ್ತರಾದ ಆರೋಗ್ಯಾಧಿಕಾರಿ ಬಾಕಿ ಮೊತ್ತವನ್ನು ಆಯುಷ್ಮಾನ್ ಮೂಲಕ ಭರಿಸಲಾಗುವುದು. ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಬೇಕೆಂದು ಆಸ್ಪತ್ರೆಯ ಮಂಡಳಿಗೆ ಸೂಚಿಸಿದರು. ತದನಂತರವೇ ಆಸ್ಪತ್ರೆಯವರು ಮೃತದೇಹವನ್ನು ಬಿಟ್ಟುಕೊಟ್ಟರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News