ಕೊರೋನ ವಿರುದ್ಧ ಹೋರಾಟಕ್ಕೆ ಅಡ್ಡಿಯಾಗುವ ಕೋಮುದ್ವೇಷದ ಸೋಂಕನ್ನು ಸೋಲಿಸಿ : ಯಾಸೀನ್ ಮಲ್ಪೆ

Update: 2020-04-10 17:41 GMT

ಉಡುಪಿ : ಕೊರೋನ ಸೋಂಕಿನ ವಿರುದ್ಧದ ಹೋರಾಟಕ್ಕೆ ಅಡ್ಡಿಯಾಗಿರುವ ಕೋಮು ದ್ವೇಷದ ಸೋಂಕನ್ನು ಸೋಲಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಅವರು ಹೇಳಿಕೆ ನೀಡಿದ್ದಾರೆ.

ಕೊರೋನ ವೈರಸ್ ಸಂಕಟದಿಂದ ಇಡೀ ಜಗತ್ತು ತಲ್ಲಣಿಸಿದೆ. ಅತ್ಯಂತ ಶ್ರೀಮಂತ ಹಾಗು ಅಷ್ಟೇ ವೈದ್ಯಕೀಯವಾಗಿ, ತಾಂತ್ರಿಕವಾಗಿ ಅತ್ಯಂತ ಮುಂದುವರಿದ ದೇಶಗಳೂ ಈ ಸಾಂಕ್ರಾಮಿಕದ ದಾಳಿಗೆ ತತ್ತರಿಸಿವೆ.ಎಲ್ಲ ರಾಜಕೀಯ, ಧಾರ್ಮಿಕ ಇನ್ನಿತರ  ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಈ ಮಹಾಮಾರಿಯನ್ನು ಎದುರಿಸಲು ಸಾಧ್ಯ. ರಾಜಕೀಯ ಲಾಭ ಪಡೆದುಕೊಳ್ಳಲು ಬಳಸುವ ವಿಷಯ ಇದಲ್ಲ. ಇದು ಅತ್ಯಂತ ಅಪಾಯಕಾರಿ. ಈ ಹೊತ್ತಿನಲ್ಲಿ ನಮ್ಮ ನಡುವಿನ ಒಡಕು ಇಡೀ ಮನುಕುಲದ ಪಾಲಿಗೇ ಮಾರಕವಾಗಿ ಪರಿಣಮಿಸಲಿದೆ. ನೀವು ಶವಗಳನ್ನೇ ನೋಡಲು ಬಯಸಿದರೆ ಮಾತ್ರ ನಿಮ್ಮ ರಾಜಕೀಯ ಆಟವನ್ನು ಮುಂದುವರಿಸಿ" ಎಂದು ನಿನ್ನೆ ವಿಶ್ವ ಅರೋಗ್ಯ ಸಂಸ್ಥೆಯ ಮುಖ್ಯಸ್ಥರು ಎಲ್ಲ ದೇಶಗಳ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಅವರು ಹೇಳಿದರು.

ಕನಿಷ್ಠ ಸಾಮಾನ್ಯ ಪ್ರಜ್ಞೆ ಹಾಗು ಮನಸ್ಸಲ್ಲಿ ಎಳ್ಳಷ್ಟು ಮಾನವೀಯತೆ ಇರುವ ಯಾರೇ ಆದರೂ ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಶ್ರೀಮಂತ, ಬಡವ, ಪುರುಷ, ಸ್ತ್ರೀ, ನಾಯಕ, ಅನುಯಾಯಿ ಇತ್ಯಾದಿ ಯಾವ ಭೇದವೂ ಇಲ್ಲದೆ ಕೊರೋನ ನಮ್ಮ ಮೇಲೆರಗುತ್ತಿದೆ. ಒಂದು ದೇಶದ ಪ್ರಧಾನಿಯೇ ಅದರ ಏಟಿಗೆ ಸಿಲುಕಿ ಆಸ್ಪತ್ರೆ ಸೇರಿದ್ದಾರೆ. ಇಂತಹ ಮಹಾಮಾರಿಗೆ ಕಡಿವಾಣ ಹಾಕಬೇಕಾದರೆ ನಾವೆಲ್ಲರೂ ನಮ್ಮೆಲ್ಲರ ಗರಿಷ್ಠ ಸಾಮರ್ಥ್ಯವನ್ನು ಪಣಕ್ಕೊಡ್ಡಿ ಹೋರಾಡಬೇಕಾಗಿದೆ. ಆ ಹೋರಾಟಕ್ಕೆ ನಮ್ಮ ನಡುವಿನ ಯಾವುದೇ ವ್ಯತ್ಯಾಸಗಳು ಒಂದು ಅಣುವಿನಷ್ಟೂ ಅಡ್ಡಿಯಾಗದಂತೆ ನೋಡಿಕೊಳ್ಳಬೇಕಾದ್ದು ಈಗ ಅನಿವಾರ್ಯ. ಧರ್ಮ,ಜಾತಿ, ಮತ , ಅಂತಸ್ತು ಯಾವುದೂ ಈಗ ನಮ್ಮ ಹಾಗು ಕೊರೋನ ನಡುವಿನ ಹೋರಾಟದಲ್ಲಿ ಅಡ್ಡ ಬರಬಾರದು. ಬಂದರೆ ನಾವೆಲ್ಲರೂ ಸೋಲುತ್ತೇವೆ, ಕೊರೋನ ಗೆದ್ದು ಅಟ್ಟಹಾಸಗೈಯುತ್ತದೆ.

ಆದರೆ ಇದನ್ನು ಅರ್ಥಮಾಡಿಕೊಳ್ಳುವಲ್ಲಿ ಇನ್ನೂ ಕೆಲವರು ವಿಫಲವಾಗಿದ್ದಾರೆ ಎಂಬುದು ಇಂದಿನ ಮಹಾ ದುರಂತವಾಗಿದೆ. ಯಾವುದೇ ಒಂದು ನಿರ್ದಿಷ್ಟ ಸಮುದಾಯ, ವರ್ಗವನ್ನು ಗುರಿ ಮಾಡುವ ಹೊತ್ತು ಇದಲ್ಲ ಎಂದು ಕೇಂದ್ರ ಸರಕಾರವೇ ಹೇಳಿದೆ. ಇಲ್ಲಿ ನಮ್ಮ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ಸ್ವತಃ ಹೇಳಿಕೆ ನೀಡಿ ಒಂದೆರಡು ಘಟನೆಗಳ ಆಧಾರದಲ್ಲಿ ಯಾವುದೇ ಒಂದು ಸಮುದಾಯವನ್ನು ಅವಹೇಳನ ಮಾಡಬಾರದು, ಅದಕ್ಕೆ ಅವಕಾಶ ನೀಡುವುದಿಲ್ಲ. ಹಾಗೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಯಾವುದೇ ಪ್ರಬುದ್ಧ ಹಾಗು ಮುತ್ಸದ್ದಿ ನಾಯಕ ಈ ಹೊತ್ತಲ್ಲಿ ಹೇಳಬಹುದಾದ ಅತ್ಯಂತ ವಿವೇಕದ ಮಾತುಗಳು ಅವು. ಅದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ.

ಆದರೆ ರಾಜ್ಯದಲ್ಲಿ ಆಡಳಿತ ಪಕ್ಷದ ನಾಯಕರು, ಅದರಲ್ಲೂ ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಪ್ರಭಾವಿ ಹಾಗು ಹಿರಿಯ ಜನಪ್ರತಿನಿಧಿಗಳು ಒಬ್ಬರ ಬಳಿಕ ಒಬ್ಬರಂತೆ ಸರದಿಯಲ್ಲಿ ನೀಡುತ್ತಿರುವ ಹೇಳಿಕೆಗಳು ಅತ್ಯಂತ ಆಘಾತಕಾರಿಯಾಗಿವೆ. ಇಡೀ ಕೊರೋನ ಸಾಂಕ್ರಾಮಿಕವನ್ನೇ ಒಂದು ನಿರ್ದಿಷ್ಟ  ಸಮುದಾಯದ ತಲೆಗೆ ಕಟ್ಟಲು ಹರಸಾಹಸ ಮಾಡುತ್ತಿರುವ ಈ ನಾಯಕರು ಹಸಿ ಸುಳ್ಳು ಹೇಳಲೂ ಹೇಸುತ್ತಿಲ್ಲ. ಜನಸಾಮಾನ್ಯರನ್ನು, ಅಮಾಯಕರನ್ನು ತಮ್ಮ ಬೇಜವಾಬ್ದಾರಿ ಹಾಗು ದ್ವೇಷದ ಮಾತುಗಳ ಮೂಲಕ ಪ್ರಚೋದಿಸಿ ಮೊದಲೇ ಭಯ ಭೀತವಾಗಿರುವ ಸಮಾಜದಲ್ಲಿ ಕೋಮುದ್ವೇಷವನ್ನೂ ಹರಡಿ ಇಡೀ ಸಮಾಜಕ್ಕೆ ವಿಷಪ್ರಾಶನ ಮಾಡಿಸಲು ಶ್ರಮಿಸುತ್ತಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ, ಖಂಡನೀಯ ಕೃತ್ಯವಾಗಿದೆ ಎಂದು ಅವರು ಹೇಳಿದರು.

ನಮ್ಮ ನಾಯಕರು ಎಡವಿದಾಗ ಅವರಿಗೆ ಅದನ್ನು ಮನಗಾಣಿಸಿ ಸರಿದಾರಿ ತೋರಿಸಬೇಕಾದ ನಮ್ಮ ಮಾಧ್ಯಮಗಳಲ್ಲಿ ಹೆಚ್ಚಿನವುಗಳು ಈ ವಿಷಯದಲ್ಲಿ ವಿಫಲವಾಗಿವೆ. ಮಾತ್ರವಲ್ಲ ಸ್ವತಃ ಹೆಚ್ಚಿನ ಮಾಧ್ಯಮಗಳೇ ಸಮಾಜದಲ್ಲಿ ದ್ವೇಷದ ಸೋಂಕು ಹರಡುವ ಪ್ರಯತ್ನದಲ್ಲಿ ನಿರತವಾಗಿಬಿಟ್ಟಿವೆ. ಇದು ಕೊರೋನಗಿಂತಲೂ ಅಪಾಯಕಾರಿ ಪರಿಸ್ಥಿತಿಯಾಗಿದೆ. ನಾವೆಲ್ಲರೂ ಜೊತೆಗೂಡಿ ಯತ್ನಿಸಿದರೆ ಕೊರೊನ ಇಂದಲ್ಲ ನಾಳೆ ನಿಯಂತ್ರಣಕ್ಕೆ  ಬರಬಹುದು. ಆದರೆ ಕೋಮು ದ್ವೇಷದ ಸೋಂಕಿಗೆ ಮದ್ದಿಲ್ಲ. ಅದು ಒಂದೊಂದಾಗಿ ನಮ್ಮ ಇಡೀ ಸಮಾಜವನ್ನೇ ಆಹುತಿ ತೆಗೆದುಕೊಳ್ಳುತ್ತದೆ.  ನಮ್ಮ ನಾಯಕರು ಮತ್ತು ನಮ್ಮ ಮಾಧ್ಯಮರಂಗ ತಮ್ಮ ಘನ ಜವಾಬ್ದಾರಿ ಮರೆತು ಈ ಕೋಮು ದ್ವೇಷದ ಸೋಂಕು ಹರಡುವ ಪ್ರಚೋದನಕಾರಿ ವೇದಿಕೆಗಳಾಗಿ ಬಿಡುವುದು ಇಲ್ಲಿನ ಸರ್ವಧರ್ಮೀಯರಿಗೆ ಭೀಕರ ಪರಿಣಾಮಗಳನ್ನು ತರಲಿದೆ. ಇದನ್ನು ಮೂಕಪ್ರೇಕ್ಷಕರಾಗಿ ನೋಡುತ್ತಿರುವ ಪ್ರಜ್ಞಾವಂತ ನಾಗರೀಕರು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಹೀಗೆ ಬಾಯಿಗೆ ಬಂದಂತೆ ಮಾತಾಡುವ ನಾಯಕರಿಗೆ ಮತ್ತು ಸುದ್ದಿ, ವಿಶ್ಲೇಷಣೆಯ ಹೆಸರಲ್ಲಿ ವದಂತಿಕೋರತನ ಮಾಡುತ್ತಿರುವ ಮಾಧ್ಯಮಗಳಿಗೆ ಎಚ್ಚರಿಸಬೇಕಾಗಿದೆ. ರಾಜ್ಯ ಸರಕಾರ ಹಾಗು ಪೊಲೀಸರು ಮುಖ್ಯಮಂತ್ರಿಗಳ ಮಾತನ್ನು ಪಾಲಿಸಿ ಇಂತಹ ಎಲ್ಲ ಹಿಂಸೆಕೋರರ ವಿರುದ್ಧ ನಿರ್ದಾಕ್ಷಿಣ್ಯವಾಗಿ  ಕಾನೂನು ಕ್ರಮ ಕೈಗೊಳ್ಳಬೇಕು. ಈ ಸಂಕಟದ ಕಾಲದಲ್ಲಿ ಇಂತಹ ಸಮಾಜವಿರೋಧಿ ಕೆಲಸ ಮಾಡುವವರು ಸಾರ್ವಜನಿಕ ಬದುಕಿನಲ್ಲಿ, ಅಧಿಕಾರದಲ್ಲಿ  ಇರಲು ಅರ್ಹರಲ್ಲ.

ಕೊರೋನ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಇದರಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಹಸಿ ಸುಳ್ಳುಗಳನ್ನು, ಅರ್ಧ ಸತ್ಯಗಳನ್ನು, ವದಂತಿಗಳನ್ನು ತಮಗೆ ಬೇಕಾದಂತೆ ಬಳಸಿಕೊಂಡು ಹರಿಯಬಿಡಲಾಗುತ್ತಿದೆ. ಇದರಿಂದ ಒಟ್ಟಾರೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಕೊರೋನವನ್ನು ಹೆಡೆಮುರಿ ಕಟ್ಟಿ ಓಡಿಸಬೇಕಾದ ಈ ಸಂದರ್ಭದಲ್ಲಿ ಸಮಾಜವೇ ಈ ಸುಳ್ಳು ಸುದ್ದಿಗಳ ಮೂಲಕ ವಿಭಜನೆಯಾಗಿ ಕೊರೋನಗೆ ಆಹಾರವಾಗುವ ಭಾರೀ ಅಪಾಯ ಎದುರಾಗಿದೆ. ಈ ಸುಳ್ಳು ಸುದ್ದಿ ಹರಡುವ ವ್ಯವಸ್ಥಿತ ಜಾಲವೇ ಕೆಲಸ ಮಾಡುತ್ತಿದೆ ಎಂಬುದು ಈಗ ರಹಸ್ಯವೇನಲ್ಲ. ಕೇಂದ್ರ , ರಾಜ್ಯ ಸರಕಾರಗಳು ಈ ಜಾಲವನ್ನು ಬುಡಸಮೇತ ಕಿತ್ತುಹಾಕಿ ಕೊರೋನ ನಿಗ್ರಹ ಕುರಿತು ತಾವು ನೀಡಿರುವ ಹೇಳಿಕೆಗಳು ಪ್ರಾಮಾಣಿಕ ಕಳಕಳಿಯವು ಎಂಬುದನ್ನು ಸಾಬೀತುಪಡಿಸಬೇಕಿದೆ ಎಂದು ಅವರು ತಿಳಿಸಿದರು.

ಮುಸಲ್ಮಾನರಲ್ಲಿ ವಿಶೇಷ ವಿನಂತಿ

ಕೊರೋನದಂತಹ ಸಂಕಟ ಆಗಾಗ ಬರುವುದಿಲ್ಲ. ಇದು ಅತ್ಯಂತ ಅಸಾಮಾನ್ಯ ಸವಾಲು. ಹಾಗಿರುವಾಗ ಅದನ್ನು ಎದುರಿಸಲು ಅನುಸರಿಸುವ ವಿಧಾನಗಳೂ ಅಸಾಮಾನ್ಯವೇ ಆಗಿರುತ್ತವೆ. ಸರಕಾರ, ವೈದ್ಯಕೀಯ ವ್ಯವಸ್ಥೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ತಜ್ಞರೊಂದಿಗೆ ಸಮಾಲೋಚಿಸಿ, ಎಲ್ಲ ಸಾಧ್ಯತೆಗಳನ್ನು ಅಳೆದು ತೂಗಿ ಕೆಲವು ನಿರ್ಧಾರಗಳನ್ನು ಪ್ರಕಟಿಸಿವೆ. ಆ ಕ್ರಮಗಳು ಇತ್ತೀಚಿಗೆ ನಾವು ಎಂದೂ ಕೇಳಿರುವ, ಕಂಡಿರುವ ಕ್ರಮಗಳಲ್ಲ. ನಮ್ಮ ಜೀವನ ಶೈಲಿ, ನಮ್ಮ ಆಚರಣೆಗಳು ಎಲ್ಲವೂ ಈ ಕ್ರಮಗಳನ್ನು ಅನುಸರಿಸುವಾಗ ಸಂಪೂರ್ಣವಾಗಿ ಬದಲಾಗಿಬಿಡುತ್ತವೆ. ಆದರೆ ಸಂದರ್ಭ, ಸವಾಲು ಎರಡೂ  ಅಸಾಮಾನ್ಯವಾಗಿರುವುದರಿಂದ ಈ ಅಸಾಮಾನ್ಯ ಕ್ರಮಗಳನ್ನು ನಾವೆಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವುದು ಅನಿವಾರ್ಯವಾಗಿದೆ. ನಮ್ಮ ಸರಕಾರಗಳು, ಪೊಲೀಸರು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಮುಂತಾದವರು ಈ ಕ್ರಮಗಳ ಜಾರಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಹಲವು ಸವಾಲುಗಳ ನಡುವೆ ತಮ್ಮ ಜೀವ ಪಣಕ್ಕೊಡ್ಡಿ ನಮಗಾಗಿ ಶ್ರಮಿಸುತ್ತಿದ್ದಾರೆ. ಅವರ ತ್ಯಾಗದ ಬಗ್ಗೆ ಎಷ್ಟು ಹೇಳಿದರೂ ಕಡಿಮೆ.

ಕೊರೋನ ನಿಗ್ರಹಕ್ಕಾಗಿ ಸರಕಾರ ತೆಗೆದುಕೊಂಡಿರುವ ಎಲ್ಲ ಕ್ರಮಗಳಿಗೆ ರಾಜ್ಯದ ಮುಸ್ಲಿಮರು ಒಕ್ಕೊರಳಿನಿಂದ ಬೆಂಬಲ ನೀಡಿದ್ದಾರೆ. ಮುಸ್ಲಿಂ ರಾಜಕೀಯ, ಧಾರ್ಮಿಕ ಮುಖಂಡರು, ಖಾಝಿಗಳು ಈ ನಿಟ್ಟಿನಲ್ಲಿ ಸಮುದಾಯಕ್ಕೆ ಸರಕಾರದೊಂದಿಗೆ ಸಂಪೂರ್ಣವಾಗಿ ಸಹಕರಿಸಲು ಕರೆ ನೀಡಿದ್ದಾರೆ. ಎಲ್ಲೆಡೆ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಗಳನ್ನು ನಿಲ್ಲಿಸಲಾಗಿದೆ. ಮುಸ್ಲಿಮರಿಗೆ ಅತ್ಯಂತ ಮುಖ್ಯವಾದ ಶುಕ್ರವಾರದ ಜುಮಾ ನಮಾಝ್ ಅನ್ನೂ ಕಳೆದ ಮೂರು ವಾರಗಳಿಂದ ನಿಲ್ಲಿಸಲಾಗಿದೆ. ಇಂತಹ ಸಂದರ್ಭ ಸರಕಾರ ಹೇಳಿದ ನಿಯಮಗಳನ್ನು ಜನರು ಚಾಚೂ ತಪ್ಪದೆ ಅನುಸರಿಸಿ ಸಹಕರಿಸಲೇಬೇಕು. ಧಾರ್ಮಿಕ ನಂಬಿಕೆ, ಆಚರಣೆಗಳು ಇತ್ಯಾದಿಗಳ ಹೆಸರಲ್ಲಿ ಯಾವುದೇ ಕಾರಣಕ್ಕೂ ನಮ್ಮಿಂದ ಯಾವುದೇ ನಿಯಮಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕಾದ್ದು ನಮ್ಮ ಆದ್ಯ ಕರ್ತವ್ಯವಾಗಿದೆ. ಅದು ನಮ್ಮ ಮತ್ತು ನಮ್ಮ ಕುಟುಂಬದ ಸುರಕ್ಷತೆ ಮಾತ್ರವಲ್ಲ ಇಡೀ ಸಮಾಜದ ಸುರಕ್ಷತೆಗೆ ಅತ್ಯಂತ ಅನಿವಾರ್ಯವಾಗಿದೆ. ನಮ್ಮ ಯಾವುದೇ ಹೆಜ್ಜೆ ದೂಷಣೆಗೆ ಆಸ್ಪದ ನೀಡುವಂತಿರಬಾರದು ಎಂಬ ಪ್ರಜ್ಞೆ ಇಂದು ಬೇರೆಲ್ಲ ದಿನಗಳಿಗಿಂತ ಹೆಚ್ಚು ಇರಬೇಕಾಗಿದೆ. ದ್ವೇಷಕಾರುವವರ, ಅದನ್ನು ಹರಡುವವರ ಬಾಯಿಗೆ ನಾವು ಆಹಾರವಾಗದಿರೋಣ. ಈ ದೇಶದ ಸ್ವಾತಂತ್ರ್ಯದಲ್ಲಿ , ಇದನ್ನು ಕಟ್ಟುವಲ್ಲಿ ನಾವೂ ನಿರ್ಣಾಯಕ ಪಾತ್ರ ವಹಿಸಿದ್ದೇವೆ, ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದೇವೆ . ಹಾಗಾಗಿ ನಮ್ಮ ಒಂದು ಬೇಜವಾಬ್ದಾರಿತನ ಹರಕುಬಾಯಿಗಳಿಗೆ ಸರಕು ಆಗದಿರಲಿ ಎಂಬ ಪ್ರಬುದ್ಧತೆಯನ್ನು ಇಂದು ನಾವು ತೋರಿಸಬೇಕಾಗಿದೆ ಎಂದು ಯಾಸೀನ್ ಮಲ್ಪೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News