ಜೈವಿಕ-ಭಯೋತ್ಪಾದಕ ದಾಳಿಯ ಕಲ್ಪನೆಯನ್ನು ತೆರೆದಿಟ್ಟ ಸಾಂಕ್ರಾಮಿಕ: ಆಂಟೋನಿಯೊ ಗುಟೆರಸ್

Update: 2020-04-10 17:51 GMT

ವಿಶ್ವಸಂಸ್ಥೆ, ಎ. 10: ಜಗತ್ತಿನಲ್ಲಿ ಜೈವಿಕ-ಭಯೋತ್ಪಾದಕ ದಾಳಿ ಹೇಗೆ ನಡೆಯಬಹುದು ಎಂಬ ಕಲ್ಪನೆಯನ್ನು ಕೋವಿಡ್-19 ಸಾಂಕ್ರಾಮಿಕವು ತೆರೆದಿಟ್ಟಿದೆ ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ. ಭಯೋತ್ಪಾದಕರು ‘ರೂಪಾಂತರಗೊಂಡ ವೈರಸ್’ಗಳನ್ನು ಅಭಿವೃದ್ಧಿಪಡಿಸಿ ಜಗತ್ತಿನಾದ್ಯಂತ ನಾಶ-ವಿನಾಶಗಳ ಸರಮಾಲೆಯನ್ನೇ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಅವರು ದೇಶಗಳಿಗೆ ಬಲವಾದ ಎಚ್ಚರಿಕೆ ನೀಡಿದರು.

ಅವರು ಗುರುವಾರ ನಡೆದ ಕೋವಿಡ್-19 ಕುರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಹಸ್ಯ ವೀಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡುತ್ತಿದ್ದರು. ಡೋಮಿನಿಕನ್ ರಿಪಬ್ಲಿಕ್ ದೇಶದ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭದ್ರತಾ ಮಂಡಳಿಯ ಸದಸ್ಯರು ನೋವೆಲ್-ಕೊರೋನವೈರಸ್ ಸಾಂಕ್ರಾಮಿಕದ ಬಗ್ಗೆ ಮೊದಲ ಬಾರಿ ಚರ್ಚಿಸಿದರು.

ಕೋವಿಡ್-19 ಸಾಂಕ್ರಾಮಿಕದ ವಿರುದ್ದದ ಹೋರಾಟವು ‘ತಲೆಮಾರೊಂದರ ಹೋರಾಟ’ವಾಗಿದೆ ಸ್ವತಃ ವಿಶ್ವಸಂಸ್ಥೆಯ ಪ್ರಧಾನ ಧ್ಯೇಯವಾಗಿದೆ ಎಂದು ಅವರು ಬಣ್ಣಿಸಿದರು.

‘‘ಕೋವಿಡ್-19 ಸಾಂಕ್ರಾಮಿಕವು ಅತ್ಯಂತ ಮಹತ್ವದ ಆರೋಗ್ಯ ಬಿಕ್ಕಟ್ಟಾಗಿದೆ. ಅದು ಅತ್ಯಂತ ದೂರಗಾಮಿ ಪರಿಣಾಮಗಳನ್ನು ಹೊಂದಿದೆ. ಈ ಸಾಂಕ್ರಾಮಿಕವು ದೇಶಗಳ ದೌರ್ಬಲ್ಯಗಳು, ಸಿದ್ಧತಾ ಹೀನತೆಗಳನ್ನು ತೆರೆದಿಟ್ಟಿದೆ. ಜೈವಿಕ-ಭಯೋತ್ಪಾದಕ ದಾಳಿ ನಡೆದರೆ ಏನಾಗಬಹುದು ಎಂಬ ಕಲ್ಪನೆಯನ್ನು ಇದು ತೆರೆದಿಟ್ಟಿದೆ. ಬದ್ಧತೆಯಿಲ್ಲದ ಗುಂಪುಗಳು ಇಂಥ ವೈರಸ್‌ಗಳನ್ನು ಅಭಿವೃದ್ಧಿಪಡಿಸಿದರೆ ಜಗತ್ತು ಇಂಥದೇ ವಿನಾಶವನ್ನು ಎದುರಿಸಬೇಕಾಗುತ್ತದೆ’’ ಎಂದು ಗುಟೆರಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News