×
Ad

ಕೊರೋನ ವೈರಸ್ : ಉಡುಪಿಯ 11 ಮಂದಿಯ ಸ್ಯಾಂಪಲ್ ನೆಗೆಟಿವ್

Update: 2020-04-11 19:45 IST

ಉಡುಪಿ, ಎ.11: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ಉಡುಪಿಯಿಂದ ಕಳುಹಿಸಲಾದ ಸ್ಯಾಂಪಲ್‌ಗಳಲ್ಲಿ ಶನಿವಾರ 11 ಮಂದಿಯ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ನಿನ್ನೆಯವರೆಗೆ ಒಟ್ಟು 47 ಮಂದಿಯ ಸ್ಯಾಂಪಲ್ ವರದಿ ಬರಬೇಕಿದ್ದು, ಇದರಲ್ಲಿ ಇಂದು 11 ಮಂದಿಯ ವರದಿ ಬಂದಿದೆ. ಎಲ್ಲವೂ ನೆಗೆಟಿವ್ ಆಗಿ ಬಂದಿದೆ. ಇನ್ನೂ 36 ಮಂದಿಯ ವರದಿಯೊಂದಿಗೆ ಇಂದು ಕಳುಹಿಸಿದ ಐವರ ಸ್ಯಾಂಪಲ್ ಸೇರಿ ಒಟ್ಟು 41 ಮಂದಿಯ ವರದಿ ಬರಬೇಕಾಗಿದೆ ಎಂದು ಡಾ. ಸೂಡ ವಿವರಿಸಿದರು.

ಇಂದು ತೀವ್ರ ಉಸಿರಾಟದ ತೊಂದರೆಯ ಮೂವರು ಹಾಗೂ ಶೀತಜ್ವರ ಲಕ್ಷಣದ ಮೂವರ ಗಂಟಲು ದ್ರವದ ಮಾದರಿಯನ್ನು ಕೊರೋನ ಸೋಂಕಿನ ಪತ್ತೆಗಾಗಿ ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದೂ ಅವರು ಹೇಳಿದರು.

ಶನಿವಾರ ಒಟ್ಟು 11 ಮಂದಿ ವಿವಿಧ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ 10 ಮಂದಿ ಪುರುಷರು ಹಾಗೂ ಒಬ್ಬರು ಮಹಿಳೆಯಾಗಿದ್ದಾರೆ. ಒಬ್ಬ ಮಹಿಳೆ ಕೋವಿಡ್ ಶಂಕಿತರಾಗಿದ್ದರೆ, ಮೂವರು ಶೀತಜ್ವರಕ್ಕಾಗಿ ಹಾಗೂ ಏಳು ಮಂದಿ ಉಸಿರಾಟದ ತೊಂದರೆ ಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದರು.

ಜಿಲ್ಲೆಯಿಂದ ಇದುವರೆಗೆ ಕಳುಹಿಸಿದ ಒಟ್ಟು 340 ಮಂದಿಯ ಸ್ಯಾಂಪಲ್ ಗಳಲ್ಲಿ ಇಂದಿನವರೆಗೆ 299 ಮಂದಿಯ ವರದಿ ಬಂದಿವೆ. ಇವುಗಳಲ್ಲಿ 296 ನೆಗೆಟಿವ್ ಆಗಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಪ್ರಯಾಣದಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿ ಶನಿವಾರ ಒಟ್ಟು 14 ಮಂದಿ ತಪಾಸಣೆಗಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2103 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 871 (ಇಂದು 99) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 1888 (67) ಮಂದಿ 14 ದಿನಗಳ ನಿಗಾ ವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 129 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 42 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ. ಇಂದು 37 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News