×
Ad

ಹೋಪ್ ಫೌಂಡೇಶನ್‌ನಿಂದ ‘ಕಿಟ್’ ವಿತರಣೆ : ಮಧ್ಯಮ ವರ್ಗದವರನ್ನೂ ಗುರುತಿಸಿದ ಸಂಸ್ಥೆ

Update: 2020-04-11 20:52 IST

ಮಂಗಳೂರು, ಎ.11: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ವಿಧಿಸಲಾದ ಲಾಕ್‌ಡೌನ್‌ನಿಂದ ತತ್ತರಿಸಿರುವ ದ.ಕ.ಜಿಲ್ಲೆಯ ವಿವಿಧ ಕಡೆಯಲ್ಲಿ ನೆಲೆಸಿರುವ ಅರ್ಹರಿಗೆ ನಗರದ ಸಮಾಜ ಸೇವಾ ಸಂಸ್ಥೆಗಳಲ್ಲಿ ಒಂದಾದ ‘ಹೋಪ್ ಫೌಂಡೇಶನ್’ ವತಿಯಿಂದ ಆಹಾರದ ಕಿಟ್ ವಿತರಿಸಲಾಗುತ್ತಿದೆ.

ಈವರೆಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನಷ್ಟೇ ಕೇಂದ್ರೀಕರಿಸಿಕೊಂಡು ಕಾರ್ಯಾಚರಿಸುತ್ತಿದ್ದ ಹೋಪ್ ಫೌಂಡೇಶನ್ ಇದೇ ಮೊದಲ ಬಾರಿಗೆ ಮಧ್ಯಮ ವರ್ಗದವರನ್ನೂ ಕೂಡ ಗುರುತಿಸಿದೆ. ಕಳೆದೊಂದು ವಾರದಿಂದ ಜಿಲ್ಲೆಯ ನೆಲ್ಯಾಡಿ, ಕೋಲ್ಪೆ, ಕುಕ್ಕಾಜೆ, ನೀರುಮಾರ್ಗ, ಬಿತ್ತ್ತುಪಾದೆ, ಅಡ್ಡೂರು, ಉಳ್ಳಾಲ,  ಮುಲ್ಕಿ ಮತ್ತಿತರ ಕಡೆ ತೆರಳಿರುವ ಸಂಸ್ಥೆಯ ಪ್ರಮುಖರು ಸುಮಾರು 765 ಕಿಟ್‌ಗಳನ್ನು ವಿತರಿಸಿದ್ದಾರೆ.

ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿರುವ ಹೋಪ್ ಫೌಂಡೇಶನ್‌ನ ಅಧ್ಯಕ್ಷ ಸೈಫ್ ಸುಲ್ತಾನ್ ‘ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಚ್ಚಿನ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರು ಮಾತ್ರ ಸಂಕಷ್ಟದ ಕಾಲದಲ್ಲಿ ಆಹಾರದ ಕಿಟ್‌ನ ನಿರೀಕ್ಷೆಯಲ್ಲಿರುತ್ತಾರೆ. ಆದರೆ ಈ ಬಾರಿ ಪರಿಸ್ಥಿತಿ ವಿಷಮವಾಗಿದೆ. ಅಂದರೆ ಮಧ್ಯಮ ವರ್ಗದವರು ಕೂಡ ತುಂಬಾ ತೊಂದರೆಗೆ ಈಡಾಗಿದ್ದಾರೆ. ಅವರಿಗೆ ಇತರರ ಬಳಿ ಸಹಾಯ ಯಾಚಿಸಲೂ ಸಾಧ್ಯವಿಲ್ಲ. ಹಾಗಾಗಿ ತೊಂದರೆಗೀಡಾದವರ ಮಧ್ಯಮ ವರ್ಗದವರ ಪಟ್ಟಿಯೊಂದನ್ನು ವಿವಿಧ ಮೂಲಗಳಿಂದ ತಯಾರಿಸಿದ್ದೇವೆ. ಅದರಂತೆ ಶೇ.50 ಬಡವರಿಗೆ ಮತ್ತು ಶೇ.50 ಮಧ್ಯಮ ವರ್ಗದವರಿಗೂ ಆಹಾರದ ಕಿಟ್ ನೀಡಲು ನಿರ್ಧರಿಸಿದ್ದೇವೆ. ಈ ಬಾರಿ ಒಟ್ಟು 1 ಸಾವಿರ ಕಿಟ್ ವಿತರಿಸುವ ಗುರಿ ಹಾಕಿಕೊಂಡಿದ್ದು, ಅದರಂತೆ ಈಗಾಗಲೆ ಹಿಂದೂ, ಮುಸ್ಲಿಂ, ಕ್ರೈಸ್ತರು ಎಂಬ ಭೇದಭಾವವಿಲ್ಲದೆ ಎಲ್ಲಾ ಸಮುದಾಯದ ವಿಧವೆಯರು, ಅನಾಥರ ಸಹಿತ ಅರ್ಹರಿಗೆ 765 ಕಿಟ್‌ಗಳನ್ನು ವಿತರಿಸಿದ್ದೇವೆ. ಈ ಮಧ್ಯೆ ನಾವು ದಾನಿಗಳ ನಿರೀಕ್ಷೆ ಯಲ್ಲಿದ್ದೇವೆ. ನೆರವು ನೀಡಲು ಬಯಸುವ ಆಸಕ್ತ ದಾನಿಗಳು ಮೊ.ಸಂ: 9900260031ನ್ನು ಸಂಪರ್ಕಿಸಬಹುದು. ಇನ್ನು ಆಹಾರದ ಕಿಟ್ ಪಡೆಯಲು ಇಚ್ಛಿಸುವ ಸಂಕಷ್ಟದಲ್ಲಿರುವ ಮಧ್ಯಮ ವರ್ಗದವರು ಕೂಡ ಸಂಪರ್ಕಿಸಬಹುದು’ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News