×
Ad

ಉಡುಪಿ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸೀಲ್‌ಡೌನ್: ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಭದ್ರತೆ- ವಾಹನ ತಪಾಸಣೆ

Update: 2020-04-11 21:37 IST

ಉಡುಪಿ, ಎ.11: ಉಡುಪಿ ಜಿಲ್ಲಾಧಿಕಾರಿ ನೀಡಿರುವ ಆದೇಶದ ಹಿನ್ನೆಲೆ ಯಲ್ಲಿ ಜಿಲ್ಲೆಯ ಗಡಿ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಇಂದಿ ನಿಂದ ಗಡಿಗಳಲ್ಲಿರುವ ಚೆಕ್ ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ಹಾಗೂ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಹೊಂದಿ ಕೊಂಡ ಕೊಲ್ಲೂರು, ಪಡುಬಿದ್ರೆ ಸಮೀಪದ ಹೆಜಮಾಡಿ, ಬೈಂದೂರು ಸಮೀಪದ ಶಿರೂರು, ಶಂಕರನಾರಾಯಣ ಸಮೀಪದ ಸಿದ್ಧಾಪುರ, ಹೆಬ್ರಿ ಸಮೀಪದ ಸೋಮೇಶ್ವರ ಹಾಗೂ ಕಾರ್ಕಳ ತಾಲೂಕಿನ ಮಾಳ, ಬೆಳ್ಮಣ್, ಬಜಗೋಳಿ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಈ ಚೆಕ್‌ಪೊಸ್ಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಕಂದಾಯ ಅಧಿಕಾರಿ ಗಳು ಮತ್ತು ಆರೋಗ್ಯ ಸಿಬ್ಬಂದಿಗಳು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದು, ತುರ್ತು ಚಿಕಿತ್ಸೆಗೆ ಸಂಬಂಧಿಸಿದ ವಾಹನಗಳು ಮತ್ತು ಸರಕು ವಾಹನಗಳನ್ನು ಮಾತ್ರ ತೀವ್ರ ತಪಾಸಣೆಗೆ ಒಳಪಡಿಸಿ ಜಿಲ್ಲೆಯ ಒಳಗೆ ಹಾಗೂ ಹೊರಗೆ ಹೋಗಲು ಅವಕಾಶ ಕಲ್ಪಿಸಲಾಗುತ್ತಿದೆ.

ಈ ಹಿಂದೆ ಬೈಂದೂರು ಸಮೀಪದ ಶಿರೂರು ಚೆಕ್‌ಪೊಸ್ಟ್‌ಗಳಲ್ಲಿ ಮುಂಬೈ ಹಾಗೂ ಭಟ್ಕಳದವರು ಪಾಸ್‌ಗಳನ್ನು ತೋರಿಸಿ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದರು. ಆದರೆ ಈಗ ಅದಕ್ಕೆಲ್ಲ ಕಡಿವಾಣ ಹಾಕಲಾಗಿದ್ದು, ಭಟ್ಕಳದವರು ಕೂಡ ಜಿಲ್ಲೆಗೆ ಪ್ರವೇಶಿಸದಂತೆ ತಡೆ ಹಿಡಿಯಲಾಗಿದೆ. ಇಲ್ಲಿ ಕೂಡ ಹೆಚ್ಚಿನ ಪೊಲಿೀಸ್ ಭದ್ರತೆ ಯನ್ನು ಒದಗಿಸಲಾಗಿದೆ.

ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಸೋಮೇಶ್ವರ ಚೆಕ್‌ಪೋಸ್ಟ್ ನಲ್ಲಿಯೂ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದ್ದು, ಇಂದು ಅನವಶ್ಯಕವಾಗಿ ಸಂಚ ರಿಸುತ್ತಿದ್ದ ವಾಹನಗಳಿಗೆ ಜಿಲ್ಲೆಯೊಳಗೆ ಪ್ರವೇಶವನ್ನು ನಿರಾಕರಿಸಿ ವಾಪಾಸ್ಸು ಕಳು ಹಿಸಲಾಗಿದೆ. ಸ್ಥಳಕ್ಕೆ ಹೆಬ್ರಿ ತಹಶೀಲ್ದಾರ್ ಮಹೇಶ್ ‌ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ಚೆಕ್‌ಪೋಸ್ಟ್‌ಗೆ ಎ.10ರಂದು ರಾತ್ರಿ ವೇಳೆ ಬೆಂಗಳೂರಿನಿಂದ ಆಗಮಿಸಿದ ಕಾರನ್ನು ಜಿಲ್ಲೆಗೆ ಪ್ರವೇಶಿಸದಂತೆ ಪೊಲೀಸರು ತಡೆದು ವಾಪಾಸು್ಸ ಕಳುಹಿಸಿರುವ ಬಗ್ಗೆ ತಿಳಿದುಬಂದಿದೆ.

ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ಔಷಧ ಹಾಗೂ ಸರಕು ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳಿಗೆ ಅವಕಾಶ ನೀಡಲಿಲ್ಲ. ಸೀಲ್‌ಡೌನ್ ಆದೇಶದ ಪರಿಣಾಮವಾಗಿ ಇಂದು ಗಡಿಯಲ್ಲಿ ವಾಹನಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಕಾರಣವಿಲ್ಲದೆ ಮಂಗಳೂರು ಹಾಗೂ ಉಡುಪಿ ಕಡೆಗೆ ಸಂಚರಿಸುವವರನ್ನು ಪೊಲೀಸರು ತಡೆದು ವಾಪಾಸು ಕಳುಹಿಸುತ್ತಿರುವುದು ಕಂಡುಬಂತು.

ಲಾಕ್‌ಡೌನ್‌ನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದೆ. ಜಿಲ್ಲೆಯ ಎಲ್ಲ ಗಡಿಗಳನ್ನು ಮುಚ್ಚಲಾಗಿದೆ. ಇದರಿಂದ ಯಾರು ಕೂಡ ಜಿಲ್ಲೆಯಿಂದ ಹೊರಗೆ ಅಥವಾ ಒಳಗೆ ಹೋಗಲು ಆಗುವುದಿಲ್ಲ. ಎ.14ರಿಂದ ಮತ್ತೆ ಲಾಕ್‌ಡೌನ್ ವಿಸ್ತರಣೆ ಆಗುತ್ತದೆ ಎಂಬ ಕಾರಣಕ್ಕೆ ಬಹಳಷ್ಟು ಮಂದಿ ಹೋಗುವುದು ಮತ್ತು ಬರುವುದಕ್ಕೆ ಆರಂಭಿಸಿದ್ದಾರೆ. ಅದಕ್ಕಾಗಿ ಗಡಿಯಲ್ಲಿ ಸೀಲ್ ಮಾಡಲಾಗಿದೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ ಉಡುಪಿ.

ಗಡಿಗಳನ್ನು ಸೀಲ್‌ಡೌನ್ ಮಾಡಿರುವ ಹಿನ್ನೆಲೆಯಲ್ಲಿ ನಿನ್ನೆ ಕೆಲವು ಗಡಿಯಲ್ಲಿ ರುವ ಚೆಕ್‌ಪೋಸ್ಟ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಅನಾವಶ್ಯಕವಾಗಿ ತಿರುಗಾಡುವ ವಾಹನಗಳಿಗೆ ಅವಕಾಶ ನೀಡದಂತೆ ಸೂಚಿಸಲಾಗಿದೆ. ಅದರಂತೆ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ತಪಾಸಣೆ ಕಾರ್ಯ ನಡೆಸಿ, ತುರ್ತು ಹಾಗೂ ಸರಕು ವಾಹನಗಳಿಗೆ ಮಾತ್ರ ಪ್ರವೇಶ ನೀಡುತ್ತಿದ್ದೇವೆ.
-ವಿಷ್ಣುವರ್ಧನ್, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ.

350ಕ್ಕೂ ಅಧಿಕ ವಾಹನಗಳು ವಶ

ಗಡಿಯನ್ನು ಸೀಲ್ ಮಾಡಿದ ಕಾರಣಕ್ಕೆ ಒಳಗೆ ಇರುವವರು ಹೇಗೆ ಬೇಕಾದರೂ ಓಡಾಡುವಂತಿಲ್ಲ. ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಗ್ಗೆ 7 ಗಂಟೆಯಿಂದ 11ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಆದರೆ ಕೆಲವು ಮಂದಿ ಬೆಳಗ್ಗೆ 11ಗಂಟೆಯ ನಂತರವೂ ಅನಗತ್ಯವಾಗಿ ತಿರುಗಾಡು ವುದು ಕಂಡುಬರುತ್ತಿದೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ, ವಾಹನವನ್ನು ಮುಟ್ಟುಗೋಲು ಹಾಕಲಾಗುತ್ತದೆ. ಹೀಗೆ ಜಿಲ್ಲೆಯಾದ್ಯಂತ 350ಕ್ಕೂ ಅಧಿಕ ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ. ಆದುದರಿಂದ ಸಾರ್ವಜನಿಕರು ವಿನಾಕಾರಣ ಮನೆಯಿಂದ ಹೊರ ಬರುವಾಗ ಆಲೋಚನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News